ಹೊಸಪೇಟೆ, ಫೆ 14 (Daijiworld News/MB) : "ಮೂಲಭೂತವಾದವನ್ನೇ ರಾಷ್ಟ್ರೀಯವಾದ ಎಂದು ಬಿಂಬಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಆದರೆ ವಾಸ್ತವವಾಗಿ ಮೂಲಭೂತವಾದ ರಾಷ್ಟ್ರೀಯವಾದವಲ್ಲ. ಇದು ತಿಳಿದಿರುವವರು ಈ ಬಗ್ಗೆ ಮೌನ ಮುರಿದು ಧ್ವನಿ ಎತ್ತದಿದ್ದಲ್ಲಿ ಅವರಿಗೆ ಮಾಡುವ ಆತ್ಮವಂಚನೆ ಆಗುತ್ತದೆ" ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಶುಕ್ರವಾರ ಹಂಪಿ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ "ಕರ್ನಾಟಕ ಹಿಸ್ಟರಿ ಕಾಂಗ್ರೆಸ್" 29ನೇ ಮಹಾಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, "ಮೂಲಭೂತವಾದಿಗಳು ಹಾಗೂ ಗರ್ಭಗುಡಿ ಸಂಸ್ಕೃತಿಯವರು ಚರಿತ್ರೆಯನ್ನು ಹಾಳು ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಹರಣ ಕೂಡಾ ಮಾಡುತ್ತಿದ್ದಾರೆ. ಚರಿತ್ರೆ ತಿಳಿಯದ, ಚಾರಿತ್ರ್ಯ ಇಲ್ಲದವರು ಚರಿತ್ರೆ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ತಿಳಿದವರು ಚರಿತ್ರೆಕಾರರು ಅದರ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿದೆ. ಇಲ್ಲವಾದಲ್ಲಿ ಸುಳ್ಳೇ ಸತ್ಯವೆಂದು ಜನ ಭಾವಿಸುವ ಸಾಧ್ಯತೆ ಇದೆ" ಎಂದು ಆತಂಕ ವ್ಯಕ್ತಪಡಿಸಿದರು.
"ದೇಶದ ಸಂಕಟದ ಸ್ಥಿತಿಯಲ್ಲಿ ತಿಳಿದವರು ಏಕಧ್ವನಿಯಲ್ಲಿ ಮಾತನಾಡಬೇಕು. ಧರ್ಮ, ರಾಜಕೀಯ ಪಕ್ಷಗಳ ಕಾರಣಕ್ಕಾಗಿ ವಾಸ್ತವವನ್ನು ಮರೆಮಾಚಲಾಗುತ್ತಿದೆ. ಧರ್ಮ, ಸಂಸ್ಕೃತಿಯನ್ನು ಅಪವ್ಯಾಖ್ಯಾನ ಮಾಡಲಾಗುತ್ತಿದೆ. ಚರಿತ್ರೆಯಲ್ಲಿ ನಾಯಕ–ಖಳನಾಯಕರೆಂಬುದೆ ಇಲ್ಲ. ಟಿಪ್ಪು ಸುಲ್ತಾನ್ ಕಾಲದಲ್ಲಿ ದೇಶ ಎಂಬ ಪರಿಕಲ್ಪನೆಯೇ ಇರಲಿಲ್ಲ. ಹೀಗಾಗಿ ಆತ ದೇಶಭಕ್ತನೋ ಅಥವಾ ದೇಶದ್ರೋಹಿಯೋ ಎಂಬ ಚರ್ಚೆಯೇ ಅಪ್ರಸ್ತುತ" ಎಂದರು.