ಬೆಂಗಳೂರು, ಫೆ 14 (DaijiworldNews/SM): ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿಧಾನಮಂಡಲ ಅಧಿವೇಶನ ಸಂದರ್ಭ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೊರಡಿಸಿದ್ದ ಆದೇಶವೊಂದನ್ನು ಮುಂದುವರೆಸಲಾಗಿದೆ. ಸದನದ ಕಲಾಪವನ್ನು ಖಾಸಗಿ ವಾಹಿನಿಯವರು ನೇರ ಪ್ರಸಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ಈ ಆದೇಶವನ್ನು ಮುಂದುವರೆಸಲು ನಿರ್ಧರಿಸಲಾಗಿದೆ.
ಇದರಿಂದಾಗಿ ಇನ್ನು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭೆಯ ಕಲಾಪ ನೇರ ಪ್ರಸಾರ ಮಾಡಲು ಖಾಸಗಿ ಸುದ್ದಿವಾಹಿನಿಗಳಿಗೆ ಅವಕಾಶವಿರುವುದಿಲ್ಲ. ಬೆಂಗಳೂರು ದೂರದರ್ಶನ ಕೇಂದ್ರ ಬಿತ್ತರಿಸುವ ನೇರ ಪ್ರಸಾರದ ವಿಡಿಯೋಗಳನ್ನು ಮಾತ್ರವೇ ಖಾಸಗಿ ವಾಹಿನಿಗಳು ಬಳಸಬಹುದಾಗಿದೆ.
ವಿಧಾನಸೌಧದಲ್ಲಿನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸ್ಪೀಕರ್, ಲೋಕಸಭೆ, ರಾಜ್ಯಸಭೆಗಳ ಮಾದರಿಯಲ್ಲೇ ರಾಜ್ಯದಲ್ಲೂ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ವಿಧಾನಸಭೆಯ ಕಲಾಪದ ನೇರ ಪ್ರಸಾರವನ್ನು ನೀಡದಂತೆ ಖಾಸಗಿ ವಾಹಿನಿಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಲೋಕಸಭೆ ಹಾಗೂ ರಾಜ್ಯಸಭೆ ಮಾದರಿಯಲ್ಲಿಯೇ ದೇಶದ ಇತರೆ ರಾಜ್ಯಗಳು ಕೂಡ ನಿರ್ಣಯಕೈಗೊಳ್ಳಬೇಕಾಗಿದೆ. ಇನ್ನು ದೇಶದ ಎಲ್ಲ ರಾಜ್ಯಗಳ ವಿಧಾನಸಭೆಗಳೂ ಜಾರಿಗೊಳಿಸಬೇಕು ಎಂಬ ಬಗ್ಗೆ ಹತ್ತಾರು ಬಾರಿ ನಿರಂತರವಾಗಿ ಚರ್ಚೆ ನಡೆದಿದೆ. ಅಲ್ಲದೆ ಈಗಾಗಲೇ ಅನೇಕ ರಾಜ್ಯಗಳು ಅದೇ ಮಾದರಿ ಅನುಸರಿಸುತ್ತಿವೆ. ಇದೇ ಕಾರಣದಿಂದಾಗಿ ನಮ್ಮ ರಾಜ್ಯದಲ್ಲಿ ಇದನ್ನು ಜಾರಿಗೆ ತರಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.