ಅಹಮದಾಬಾದ್, ಫೆ 15 (Daijiworld News/MB) : ಅಹಮದಾಬಾದ್ಗೆ ಫೆ.24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಹಿನ್ನಲೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ನಡುವೆ "ವಿಮಾನ ನಿಲ್ದಾಣದ ಬಳಿ ಇರುವ ಕೊಳೆಗೇರಿ ಕಾಣಿಸದಂತೆ ಬಿಜೆಪಿ ಆಡಳಿತವಿರುವ ಅಹಮದಾಬಾದ್ ಮಹಾನಗರ ಪಾಲಿಕೆ (ಎಎಂಸಿ) 500 ಮೀಟರ್ ಉದ್ದದ ಗೋಡೆ ನಿರ್ಮಿಸುತ್ತಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಟ್ರಂಪ್ ಅವರಿಂದ ಭಾರತದ ವಾಸ್ತವ ಚಿತ್ರಣವನ್ನು ಮುಚ್ಚಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಬಡತನವನ್ನು ನಿರ್ಣಾಮ ಮಾಡುವ ಬದಲಾಗಿ ಗೋಡೆ ನಿರ್ಮಾಣ ಮಾಡಿ ಬಡತನ ಕಾಣದಂತೆ ಮಾಡಲಾಗುತ್ತಿದೆ ಎಂದು ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಶ್ ದೋಶಿ ಆರೋಪಿಸಿದರು.
ಈ ಆರೋಪವನ್ನು ಎಎಂಸಿ ಉಪ ಆಯುಕ್ತ ಕೆ.ಬಿ. ಥಕ್ಕರ್ ಅಲ್ಲಗಳೆದಿದ್ದು, "ಭಾರತಕ್ಕೆ ಟ್ರಂಪ್ ಅವರ ಭೇಟಿಗೂ ಈ ಗೋಡೆ ನಿರ್ಮಾಣ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಅಲ್ಲಿ ಮೊದಲೇ ಗೋಡೆಯಿತ್ತು. ಗೋಡೆ ಶಿಥಿಲವಾದ ಕಾರಣ ಹೊಸ ಗೋಡೆ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿತ್ತು. ಒಂದು ತಿಂಗಳ ಹಿಂದೆಯೇ ಆನ್ಲೈನ್ ಮೂಲಕ ಟೆಂಡರ್ ಆಹ್ವಾನ ಮಾಡಲಾಗಿದ್ದು ಟ್ರಂಪ್ ಭೇಟಿ ಘೋಷಣೆಗೂ ಮುನ್ನವೇ ಗುತ್ತಿಗೆ ನೀಡಲಾಗಿದೆ" ಎಂದು ಅವರು ತಿಳಿಸಿದ್ದಾರೆ.