ಚೆನ್ನೈ, ಫೆ 15 (Daijiworld News/MB) : "ಹೋಗಿ ಬೇರೆ ಕೆಲಸ ನೋಡಿ" ಎಂದು ತಾನು ಸೇರಿದಂತೆ ಇತರ ತಮಿಳು ನಟರು ಕ್ರೈಸ್ತ ಮತಾಂತರ ಗುಂಪಿನ ಸದಸ್ಯರು ಎನ್ನುವ ಬಲಪಂಥೀಯ ಟ್ರೋಲ್ ಗಳಿಗೆ ಮಕ್ಕಳ್ ಸೆಲ್ವನ್ ಖ್ಯಾತಿಯ ನಟ ವಿಜಯ್ ಸೇತುಪತಿ ತಿರುಗೇಟು ನೀಡಿದ್ದಾರೆ.
ವಿಜಯ್ ಮನೆ ಮೇಲೆ ತೆರಿಗೆ ಇಲಾಖೆ ದಾಳಿ ಮಾಡಿದ ಬಳಿಕ ಬಲಪಂಥೀಯ ಟ್ರೋಲ್ಗಳು ಈ ಪ್ರಕರಣಕ್ಕೆ ಕೋಮುಬಣ್ಣ ಬಳಿದಿದ್ದು ಸುಳ್ಳುಗಳನ್ನು ಹರಡಿತ್ತು. ಆದಾಯ ತೆರಿಗೆ ಇಲಾಖೆಯು ವಿಜಯ್ ಮನೆಯಿಂದ ವಿಶೇಷವಾಗಿ ಏನನ್ನೂ ವಶಕ್ಕೆ ಪಡೆದಿಲ್ಲ ಎಂದು ತಿಳಿಸಿದ್ದರೂ , "ತಮಿಳುನಾಡಿನಲ್ಲಿ ಕ್ರೈಸ್ತ ಮತಾಂತರ ನೆಟ್ವರ್ಕ್ನ ಭಾಗವಾಗಿ ವಿಜಯ್, ವಿಜಯ್ ಸೇತುಪತಿ ಸೇರಿ ಹಕವು ನಟರು ಹಾಗೆಯೇ ಕೈಗಾರಿಕೋದ್ಯಮಿಗಳೂ ಇದ್ದಾರೆ. ಈ ಮತಾಂತರ ಕಾರ್ಯಕ್ಕಾಗಿ ಇವರೆಲ್ಲರೂ ಹಣ ಒದಗಿಸುತ್ತಾರೆ ಎಂದು ಸುಳ್ಳು ಟ್ರೋಲ್ಗಳನ್ನು ಹರಡಲಾಗಿತ್ತು.
ಅಷ್ಟು ಮಾತ್ರವಲ್ಲದೆ ಈಗಾಗಲೇ ತಮಿಳು ನಟರಾದ ಆರ್ಯ, ರಮೇಶ್ ಖನ್ನಾ, ಆರತಿ ಹಾಗೂ ವಿಜಯ್ ಸೇತುಪತಿಯವರನ್ನು ವಡಪಳನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತಾಂತರ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ.
ಹಾಗೆಯೇ ಕ್ರೈಸ್ರ ಶಿಕ್ಷಣ ಸಂಸ್ಥೆಗಳ ಮೇಲೂ ಈ ರೀತಿ ಆರೋಪ ಮಾಡಲಾಗಿದೆ.
ಈ ಎಲ್ಲಾ ಸುಳ್ಳು ಸುದ್ದಿಗಳು ಹರಡುತ್ತಿರುವುದು ವಿಜಯ್ ಸೇತುಪತಿ ಗಮನಕ್ಕೆ ಬಂದಿದ್ದು ಅವರು ಈ ಟ್ರೋಲ್ಗಳಿಗೆ ತಿರುಗೇಟು ನೀಡಿದ್ದಾರೆ. "ಹೋಗಿ ಬೇರೆ ಕೆಲಸ ಇದ್ದರೆ ನೋಡಿ (ಪೋಯಿ ವೇರೆ ವೇಲೆ ಇರುಂದ ಪಾರುಂಗಡಾ) ಎಂದು ಟ್ವೀಟ್ ಮಾಡಿದ್ದಾರೆ.