ಮೈಸೂರು, ಫೆ 15 (Daijiworld News/MB) : ತಾನು ಮುಖ್ಯಮಂತ್ರಿಯಾಗಬೇಕು ಎಂಬ ಬಯಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಮೈಸೂರಿನಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದು ಭಾಷಣದ ವೇಳೆ, ಈ ಕಾರ್ಯಕ್ರಮದಲ್ಲಿ ಇದ್ದ ಮುಖ್ಯಮಂತ್ರಿ ಚಂದ್ರು ಅವರ ಹೆಸರನ್ನು ಉಲ್ಲೇಖಿಸಿ, "ನೀವು ಕೊನೆಯವರೆಗೂ ಶಾಶ್ವತ ಮುಖ್ಯಮಂತ್ರಿಯಾಗಿಯೇ ಇರಿ. ನಮಗೆ ಕನಿಷ್ಠ ಮಾಜಿ ಮುಖ್ಯಮಂತ್ರಿ ಎಂದು ಕರೆಸಿಕೊಳ್ಳುವ ಭಾಗ್ಯವನ್ನಾದರೂ ಕೊಡಿ" ಎಂದು ಹೇಳಿದ್ದಾರೆ.
ನಾಟಕೋತ್ಸವ ಉದ್ಘಾಟಿಸಿ ನಟ ಅನಂತನಾಗ್ ಮಾತನಾಡುವಾಗಲೂ "ಮುಖ್ಯಮಂತ್ರಿ" ಚಂದ್ರು ಹೆಸರನ್ನು ಪ್ರಸ್ತಾಪಿಸಿದ್ದರು. ಈ ವೇಳೆ ವೇದಿಯಲ್ಲಿದ್ದ ಸಚಿವರು "ನನ್ನನ್ನು ಕನಿಷ್ಠ ಮಾಜಿ ಮುಖ್ಯ ಮಂತ್ರಿಯನ್ನಾಗಿ ಮಾಡಲು ಆಶೀರ್ವದಿಸಿ" ಎಂದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಅನಂತನಾಗ್, "ಚಾಮುಂಡೇಶ್ವರಿ ನಿಮ್ಮ ಬಯಕೆಯನ್ನು ಈಡೇರಿಸಲಿ" ಎಂದು ಹೇಳಿದರು.
ಸಂಸದ ಪ್ರತಾಪ ಸಿಂಹ ಮಾತನಾಡಿ, "ಆಸೆ ಇದ್ದರೆ ಮಾತ್ರ ಅಧಿಕಾರ ಸಿಗುತ್ತದೆ. ಸಿ.ಟಿ.ರವಿ ಅವರ ಬಯಕೆ ಈಡೇರಲಿ" ಎಂದರು. ಆ ಕೂಡಲೇ ಪ್ರತಿಕ್ರಿಯಿಸಿದ ಸಚಿವರು "ನಾನು ತಮಾಷೆಗೆ ಹೇಳಿದ್ದು. ಅದನ್ನೇ ದೊಡ್ಡದಾಗಿ ಮಾಡಬೇಡಿ" ಎಂದು ನಗು ಬೀರಿದರು.