ನವದೆಹಲಿ, ಫೆ 15 (Daijiworld News/MB) : ಮಾರ್ಚ್ 31 ರ ಒಳಗಾಗಿ ಪ್ಯಾನ್ ಕಾರ್ಡ್ಗೆ ಆಧಾರ್ ಲಿಂಕ್ ಆಗದಿದ್ದಲ್ಲಿ ಸುಮಾರು 17 ಕೋಟಿಗೂ ಅಧಿಕ ಪ್ಯಾನ್ ಕಾರ್ಡ್ ರದ್ದು ಮಾಡಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಪ್ಯಾನ್ ಕಾರ್ಡ್ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಹಲವು ಬಾರಿ ವಿಸ್ತರಿಸಲಾಗಿದ್ದು ಈಗ ಮಾರ್ಚ್ 31 ರೊಳಗಾಗಿ ಆಧಾರ್ ಕಾರ್ಡ್ ಲಿಂಕ್ ಆಗಬೇಕೆಂದು ಗಡುವು ನೀಡಲಾಗಿದೆ.
ಜನವರಿ ಅಂತ್ಯದ ವೇಳೆಗೆ 30.75 ಕೋಟಿ ಪ್ಯಾನ್ ಕಾರ್ಡ್ಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲಾಗಿದ್ದು ಇನ್ನು 17.58 ಕೋಟಿ ಜನರು ಲಿಂಕ್ ಮಾಡಿಲ್ಲ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎಎ 41 ನೇ ಷರತ್ತಿನ ಅನ್ವಯ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ವಿಫಲನಾದ ವ್ಯಕ್ತಿಯ ಪ್ಯಾನ್ ಕಾರ್ಡ್ನ್ನು ನಿಯಮನುಸಾರ ಅಸಿಂಧುಗೊಳಿಸಲಾಗುವುದು ಎಂದು ಆದಾಯ ತೆರಿಗೆ ಹೇಳಿದೆ.
2018 ರ ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಆಧಾರ್ ಅನ್ನು ಸಾಂವಿಧಾನಿಕವಾಗಿ ಮಾನ್ಯ ಎಂದು ಘೋಷಿಸಿತ್ತು. ಹಾಗೆಯೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಹಾಗೂ ಪ್ಯಾನ್ ಕಾರ್ಡ್ಗಳ ಹಂಚಿಕೆಗೆ ಬಯೋಮೆಟ್ರಿಕ್ ಐಡಿ ಕಡ್ಡಾಯ ಎಂದು ಹೇಳಿತ್ತು.
ನಕಲಿ ಪ್ಯಾನ್ ಕಾರ್ಡ್ಗಳಿಗೆ ಕಡಿವಾಣ ಹಾಕುವುದಲ್ಲದೇ ತೆರಿಗೆ ವಂಚನೆ ಹಾಗೂ ಸಾರ್ವಜನಿಕ ಹಣ ದುರ್ಬಳಕೆ ತಡೆಯುವ ನಿಟ್ಟಿನಿಂದ ಪ್ಯಾನ್ ಕಾರ್ಡ್ ಹೊಂದಿರುವವರು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಈ ಹಿಂದೆಯೇ ಹೇಳಿತ್ತು.
ಲಿಂಕ್ ಮಾಡಲು ತೆರಿಗೆ ಇಲಾಖೆಯ ಇ-ಫಿಲ್ಲಿಂಗ್ ಅಧಿಕೃತ ಪೋರ್ಟಲ್ಗೆ ಭೇಟಿ ನೀಡಬೇಕು.
https://www.incometaxindiaefiling.gov.in/home