ರಾಮನಗರ, ಫೆ.15 (DaijiworldNews/PY): "ಬಿಜೆಪಿಯ ನಾಯಕರು ಕೇಸರಿಯ ಬಾವುಟವನ್ನು ಹಿಡಿದುಕೊಂಡು ಬೀದಿಯಲ್ಲಿ ಓಡಾಡುತ್ತಾರೆ. ಮುಸ್ಲಿಮರು ರಾಷ್ಟ್ರಧ್ವಜವನ್ನು ಹಿಡಿದುಕೊಂಡು ತಮ್ಮ ಬದ್ಧತೆ ಏನು ಎಂದು ಹೋರಾಟ ಮಾಡುತ್ತಿದ್ದಾರೆ. ಹಾಗಾಗಿ ಇದರಲ್ಲಿಯೇ ಬಿಜೆಪಿಯ ನಾಯಕರಿಗೂ ಮುಸ್ಲಿಮರಿಗೂ ಇರುವಂತಹ ವ್ಯತ್ಯಾಸವನ್ನು ಗುರುತಿಸಬಹುದು" ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಸಿಎಎ, ಎನ್ಆರ್ಸಿ ವಿರೋಧಿಸಿ ಪೆಟ್ಟಾ ಶಾಲಾ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಈ ದೇಶದ ಆಸ್ತಿ. ಸರ್ವಧರ್ಮಗಳ ಆಸ್ತಿ ಎಂಬುದು ಇತಿಹಾಸ ನೋಡುತ್ತಾ ಬಂದಾಗ ತಿಳಿಯುತ್ತದೆ. ಈ ದೇಶ ಯಾರಪ್ಪನಾ ಆಸ್ತಿಯೂ ಅಲ್ಲ. ಬಿಜೆಪಿಯ, ಆರ್ಎಸ್ಎಸ್ನ ಆಸ್ತಿ ಅಲ್ಲ" ಎಂದು ತಿಳಿಸಿದರು.
"ನೆಹರು ಪ್ರಧಾನಿಯಾಗಿ ಕೆಲಸ ಮಾಡಬೇಕಾದರೆ ಅಮಿತ್ ಶಾ ಹುಟ್ಟೇ ಇರಲಿಲ್ಲ. ಅವರ ಬಗ್ಗೆ ಇವರು ಚರ್ಚೆ ಮಾಡುತ್ತಾರೆ. ದೇಶಕ್ಕೆ ಹಲವಾರು ರೀತಿಯ ಸಂಪತ್ತನ್ನು ಕೊಡುವಲ್ಲಿ ಮುಸ್ಲಿಮರ ಕಾಣಿಕೆಯೂ ಇದೆ. ಹಿಂದೂ ರಾಷ್ಟ್ರದ ಹೆಸರಿನಲ್ಲಿ ದೇಶವನ್ನು ಒಡೆಯಲು ಹೊರಟಿದ್ದಾರೆ. ಅನಂತ್ಕುಮಾರ್ ಹೆಗ್ಡೆ ಬಗ್ಗೆ ಚರ್ಚೆ ಮಾಡಲು ಸಾಧ್ಯವಿಲ್ಲ ಅವರು ಸಮಾಜ ಒಡೆಯುವ ಕಾರ್ಯವನ್ನು ಮಾಡುವ ಸಮಾಜ ಘಾತಕ ಶಕ್ತಿ" ಎಂದರು.
"ನರೇಂದ್ರ ಮೋದಿ-ಅಮಿತ್ ಶಾ ಅಂತವರು ದೇಶವನ್ನು ಹಾಳು ಮಾಡಲು ಹೊರಟಿದ್ದಾರೆ. ಮಂಗಳೂರು ವಿಮಾನ ನಿಲ್ದಾಣ ಅತ್ಯಂತ ಲಾಭದಾಯವಾಗಿರುವ ನಿಲ್ದಾಣ ಅದನ್ನು ಅದಾನಿಗೆ ಕೊಟ್ಟಿದ್ದಾರೆ. ಏರ್ ಇಂಡಿಯಾ ಕಂಪನಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು, ಅಡವಿಡಲು ಮುಂದಾಗಿದ್ದಾರೆ. ಇಂದಿನ ಹೋರಾಟ ಮುಸಲ್ಮಾನ ಹೋರಾಟ ಮಾತ್ರವಲ್ಲ, ಹಿಂದೂಗಳು ಸಹ ಹೋರಾಟ ಮಾಡಬೇಕು. ದೇಶದ ಸಂಪತ್ತನ್ನು ಲೂಟಿ ಮಾಡಿ ಸರ್ಕಾರ ಮಾಡುತ್ತಿದ್ದೀರಿ" ಎಂದು ಹೇಳಿದರು.
"ಅಮಿತ್ ಶಾ, ನರೇಂದ್ರ ಮೋದಿ ಅವರು ಬರುವ ಮುನ್ನವೇ ಸಾಕಷ್ಟು ಜನ ದೇಶವನ್ನು ಅಭಿವೃದ್ದಿ ಮಾಡಿದ್ದಾರೆ. ಅವರು ಅಭಿವೃದ್ದಿ ಮಾಡಿದ ಮೇಲೆಯೇ ಇವರು ಬಂದಿರುವುದು. ಅಮಿತ್ ಶಾ, ನರೇಂದ್ರ ಮೋದಿ ಇವರಿಬ್ಬರಿದ್ರೆ ದೇಶದಲ್ಲಿ ಮುಂದಿನ ದಿನಗಳಲ್ಲಿ ಒಳ್ಳೆಯದಿಲ್ಲ. 40 ದಿನಗಳಲ್ಲಿ ದೇಶವನ್ನು ಬದಲಾವಣೆ ಮಾಡಿದೆ ಎಂದು ಮೋದಿ ಹೇಳುತ್ತಾರೆ. ಇವರು ಬರುವುದಕ್ಕೂ ಮೊದಲು ಪರಕೀಯರ ಆಳ್ವಿಕೆಯಲ್ಲಿತ್ತಾ" ಎಂದು ಕೇಳಿದರು.