ನವದೆಹಲಿ, ಫೆ.15 (DaijiworldNews/PY): ಭಾರತದ ಆಂತರಿಕ ವಿಚಾರಗಳಲ್ಲಿ ಇತರ ದೇಶಗಳು ಮಧ್ಯಪ್ರವೇಶಿಸುವುದನ್ನು ನಾವು ಸಹಿಸುವುದಿಲ್ಲ. ಟರ್ಕಿ ನಾಯಕತ್ವ ಇದನ್ನು ತಿಳಿದುಕೊಳ್ಳಬೇಕು. ವಾಸ್ತವವನ್ನು ಸರಿಯಾಗಿ ಗ್ರಹಿಸಿ ಬಳಿಕ ಪ್ರತಿಕ್ರಿಯಿಸಬೇಕು. ಪಾಕಿಸ್ತಾನದಿಂದ ಭಾರತ ಎದುರಿಸುತ್ತಿರುವ ಭಯೋತ್ಪಾದನೆಯ ಆತಂಕವನ್ನು ಅರ್ಥಮಾಡಿಕೊಳ್ಳಬೇಕು ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಪಾಕ್ ಪ್ರವಾಸ ಕೈಗೊಂಡಿರುವ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯೀಪ್ ಎರ್ಡೋಗನ್, ದಶಕಗಳಿಂದ ಸಂಕಷ್ಟ ಅನುಭವಿಸುತ್ತಿರುವ ಜಮ್ಮು ಕಾಶ್ಮೀರದ ಪರಿಸ್ಥಿತಿ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಬಾಣಲೆಯಿಂದ ನೇರವಾಗಿ ಬೆಂಕಿಗೆ ಬಿದ್ದಂತಾಗಿದೆ. ಕಾಶ್ಮೀರದಲ್ಲಿರುವ ನಮ್ಮ ಸಹೋದರ, ಸಹೋದರಿಯರ ದಬ್ಬಾಳಿಕೆಯಡಿ ಜೀವನ ನಡೆಸುವಂತಾಗಿದೆ. ಜಮ್ಮು ಕಾಶ್ಮೀರದಲ್ಲಿನ ಸ್ಥಿತಿ ಈಗ ಮೊದಲ ಮಹಾಯುದ್ಧದ ಬಳಿಕದ ಸ್ಥಿತಿ ಇದೆ ಎಂದು ತಿಳಿಸಿದ್ದರು.
ಟರ್ಕಿ ಅಧ್ಯಕ್ಷ ಎರ್ಡೋಗನ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಭಾರತ, ಭಾರತದ ಆಂತರಿಕ ವ್ಯವಹಾರಗಳ ವಿಚಾರದಲ್ಲಿ ಟರ್ಕಿ ಮೂಗು ತೂರಿಸುವ ಅಗತ್ಯವಿಲ್ಲ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಸತ್ಯಾಂಶ ಏನು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಲಿ ಎಂದು ರವೀಶ್ ಕುಮಾರ್ ಹೇಳಿದ್ದಾರೆ.