ತಿರುವನಂತಪುರ, ಫೆ.15 (DaijiworldNews/PY): ಆದಾಯ ತೆರಿಗೆ ವಿನಾಯಿತಿ ಮನವಿಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲು ಸುಮಾರು 20 ವರ್ಷ ತಡಮಾಡಿದ ಕೈಗಾರಿಕೆ ಇಲಾಖೆಯ ಲೋಪವನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಹೈಕೋರ್ಟ್ ಐಎಎಸ್ ಅಧಿಕಾರಿಯೊಬ್ಬರಿಗೆ 100 ಗಿಡಗಳನ್ನು ನೆಡುವಂತೆ ಆದೇಶಿಸಿದೆ.
ಈ ವಿಚಾರದ ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ಅಮಿತ್ ರಾವಲ್ ಅವರು, ಈ ಅವಧಿಯಲ್ಲಿ ಇಲಾಖೆಯ ನಿರ್ದೇಶಕ ಹುದ್ದೆಯಲ್ಲಿದ್ದ ಎಲ್ಲರೂ ತಪ್ಪು ಮಾಡಿದ್ದು, ಪ್ರಸ್ತುತ ಈ ಹುದ್ದೆಯಲ್ಲಿರುವ ಕೆ.ಬಿಜು ಅರಣ್ಯ ಇಲಾಖೆ ಸೂಚಿಸುವ ಸ್ಥಳದಲ್ಲಿ 100 ಗಿಡ ನೆಡಬೇಕು ಎಂದು ಆದೇಶಿಸಿದ್ದಾರೆ.
ರಾಸಾಯನಿಕಗಳ ವಹಿವಾಟು ನಡೆಸುವ ಖಾಸಗಿ ಸಂಸ್ಥೆಯೊಂದು 2001ರಲ್ಲಿ ಆದಾಯ ತೆರಿಗೆ ವಿನಾಯಿತಿ ಕೋರಿ ಕೈಗಾರಿಕಾ ಇಲಾಖೆಗೆ ಮನವಿ ಸಲ್ಲಿಸಿತ್ತು. ಆದರೆ, ಇಲಾಖೆ ಈ ಮನವಿಯನ್ನು ತಿರಸ್ಕರಿಸಿತ್ತು. 2003ರಲ್ಲಿ ಈ ಸಂಬಂಧ ಹೈಕೋರ್ಟ್ನಲ್ಲಿ ಕಂಪನಿಯು ಅರ್ಜಿ ಸಲ್ಲಿಸಿತ್ತು. ಕಂಪನಿಯ ಅಹವಾಲು ಆಲಿಸುವಂತೆ ಹೈಕೋರ್ಟ್ ಕೈಗಾರಿಕಾ ಇಲಾಖೆಗೆ ಸೂಚಿಸಿತ್ತು.
ಹಲವು ವಿಚಾರಣೆಗಳ ಬಳಿಕವೂ ಕೈಗಾರಿಕಾ ಇಲಾಖೆ ಈ ವಿಚಾರವಾಗಿ ತೀರ್ಮಾನ ಕೈಗೊಂಡಿರಲಿಲ್ಲ. ಖಾಸಗಿ ಕಂಪನಿಯು ಮತ್ತೊಮ್ಮೆ ಹೈಕೋರ್ಟ್ಗೆ ಮನವಿ ಸಲ್ಲಿಸಿತು. ವಿಚಾರಣೆ ನಡೆಸಿದ ನ್ಯಾಯಾಲಯವು, ಕರ್ತವ್ಯಲೋಪಕ್ಕಾಗಿ ಅಧಿಕಾರಿಗೆ ಅಪರೂಪದ ಶಿಕ್ಷೆ ವಿಧಿಸಿತು.
ಐಎಎಸ್ ಅಧಿಕಾರಿ ಬಿಜು ಅವರು ಕೇರಳ ಸರ್ಕಾರದಲ್ಲಿ ನೀರಾವರಿ ಸಚಿವರಾಗಿರುವ ಕೆ.ಕೃಷ್ಣಮೂರ್ತಿ ಅವರ ಮಗ. ಮಧ್ಯ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಕೃಷ್ಣಮೂರ್ತಿ ಜನಪ್ರಿಯ ರೈತರಾಗಿದ್ದಾರೆ.