ಬೆಂಗಳೂರು, ಫೆ 15 (Daijiworld News/MB) : ಶಾಹೀನ್ ಶಾಲೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಿರುವುದನ್ನು ಖಂಡನೆ ಮಾಡಿ ರಾಜ್ಯ ಬಿಜೆಪಿ ಸರ್ಕಾರವು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿರುವುದನ್ನು ವಿರೋಧ ಮಾಡಿ ಕಾಂಗ್ರೆಸ್ ಸಮಿತಿಯ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದಿದ್ದು ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ಸಂದರ್ಭ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುತ್ತಿಗೆ ಹಾಕಲು ಯತ್ನ ಮಾಡಿದ ಸಂದರ್ಭದಲ್ಲಿ ಪೊಲೀಸರು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸೇರಿಸಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದರಾದ ಡಿ.ಕೆ.ಸುರೇಶ್, ಬಿ.ಕೆ. ಹರಿಪ್ರಸಾದ್, ಪಕ್ಷದ ಮುಖಂಡರಾದ ಸೌಮ್ಯಾ ರೆಡ್ಡಿ, ರಿಝ್ವನ್ ಅರ್ಶದ್, ಎಲ್ ಹನುಮಂತಯ್ಯ, ನಾರಾಯಣಸ್ವಾಮಿ ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದಕ್ಕೂ ಮೊದಲು ರೇಸ್ಕೋರ್ಸ್ ರಸ್ತೆಯ ಗಾಂಧಿ ಪ್ರತಿಮೆಯ ಬಳಿಯಿಂದ ಸಿಎಂ ಗೃಹ ಕಚೇರಿಯವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಶಾಹೀನ್ ಶಾಲೆಯ ಮೇಲೆ ದೇಶದ್ರೋಹ ಪ್ರಕರಣ ದಾಖಲು ಮಾಡುವುದರ ಮೂಲಕ ಕಾನೂನಿನ ದುರುಪಯೋಗ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಪಟ್ಟಿದ್ದರು.