ಬೆಂಗಳೂರು, ಫೆ.15 (DaijiworldNews/PY): ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೀದರ್ನ ಶಾಹೀನ್ ಶಾಲೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರು
ಶನಿವಾರ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು, ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸುವುದು ಕಾಂಗ್ರೆಸ್ ಜವಾಬ್ದಾರಿ. ಇವರು ಭಾವನಾತ್ಮಕ ವಿಚಾರವನ್ನ ಜನರ ಮುಂದಿಟ್ಟು ಜನರ ದಾರಿ ತಪ್ಪಿಸುತ್ತಿದ್ದಾರೆ. ಕಾನೂನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ ಜೋಡಿ ದೇಶವನ್ನು ನಾಶ ಮಾಡುತ್ತಿದೆ. ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದರು.
ಮೈಸೂರಿನಲ್ಲಿ ಯುವತಿ ಫ್ರೀ ಕಾಶ್ಮೀರ ಎಂದರೆ ಕೇಸ್ ಬೀಳುತ್ತದೆ. ಖಾದರ್ ಮಾತಾಡಿದರೆ ದೇಶದ್ರೋಹದ ಕೇಸ್ ಹಾಕುತ್ತಾರೆ. ಬೀದರ್ನ ಶಾಹೀನ ಶಾಲೆಯಲ್ಲಿ ಸಿಎಎ ಬಗ್ಗೆ ಮಕ್ಕಳು ನಾಟಕ ಮಾಡಿದ್ದರು. ನಾಟಕ ಮಾಡುವಾಗ ಹಿರಿಯರ ಮಾಹಿತಿ ಕೇಳಿದರೆ ಅವರು ಎಲ್ಲಿಂದ ತರುತ್ತಾರೆ? ಸಮಾಧಿಯಿಂದ ಬಗೆದು ತರಬೇಕಾ ? ಮಾಹಿತಿ ಕೇಳಲು ಬರೋರಿಗೆ ಚಪ್ಪಲಿ ತಗೊಂಡು ಹೊಡಿತೀನಿ, ಎಂದು 11 ವರ್ಷದ ಮಗು ಡೈಲಾಗ್ ಹೇಳುತ್ತದೆ. ಅದು ಮೋದಿ ವಿರುದ್ಧ ಹೇಳಿದ ಮಾತಲ್ಲ. ಮಾಹಿತಿ ಕೇಳಲು ಬರುವವರಿಗೆ ಹೇಳಿದ ಮಾತಾಗಿದೆ ಎಂದು ಹೇಳಿದರು.
ಯಡಿಯೂರಪ್ಪ, ಬೊಮ್ಮಾಯಿಗೆ ಗೊತ್ತಿಲ್ಲದೆ ಪೊಲೀಸರು ಕೇಸ್ ಹಾಕುವುದಿಲ್ಲ. ಪೊಲೀಸರಿಗೆ ನಾನು ಹೇಳೋದು ಒಂದೇ, ಯಡಿಯೂರಪ್ಪ ಶಾಶ್ವತವಾಗಿ ಗೂಟ ಹೊಡ್ಕೊಂಡು ಕೂತಿರಲ್ಲ. ದೆಹಲಿ ಜೆಎನ್ಯು ವಿವಿಯಲ್ಲಿ ಗೂಂಡಾಗಳು ದಾಳಿ ಮಾಡಿದ್ದರು. ಇಂತಹವರ ಮೇಲೆ ಕೇಸ್ ಹಾಕಿಲ್ಲ. ಇದಕ್ಕಿಂತ ಕ್ರೂರವಾದ ಸರ್ಕಾರ ಮತ್ತೊಂದಿಲ್ಲ. ಬಿಜೆಪಿಯ ನಾಯಕರ ಮಾತನ್ನು ಕೇಳಿ ಕಾನೂನು ವಿರುದ್ಧವಾಗಿ ನಡೆದುಕೊಂಡರೆ ಮುಂದಿನ ದಿನದಲ್ಲಿ ತಕ್ಕ ಪಾಠ ಕಲಿಯಬೇಕಾಗುತ್ತೆ ಎಂದರು.
ಆರ್ ಅಶೋಕ ಮಗನ ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಹ್ಯಾರಿಸ್ ಮಗನನ್ನ ಗೂಂಡಾ ಎಂದು ಪ್ರಚಾರ ಮಾಡಲಾಗುತ್ತಿದೆ. ಬಿಜೆಪಿ ತೊಲಗಿಸುವವರೆಗೂ ಹೋರಾಟ ನಿಲ್ಲಲ್ಲ ಎಂದು ಹೇಳಿದರು.