ದಾವಣಗೆರೆ, ಫೆ.15 (DaijiworldNews/PY): "ಓಟ್ ಬ್ಯಾಂಕ್ಗಾಗಿ ದೇಶಕ್ಕೆ ಬೆಂಕಿ ಇಡುವ ಕೆಲಸ ಕಾಂಗ್ರೆಸ್ನವರು ಮಾಡುತ್ತಿದ್ದಾರೆ. ಸಿದ್ದರಾಮಯ್ಯನ ಸರ್ಕಾರ ಇದ್ದಾಗ ಕೊಲೆಗಳು, ಅತ್ಯಾಚಾರಗಳಾದವು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ದಾವಣಗೆರೆಯಲ್ಲಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, "ಸಂವಿಧಾನ ವಿರೋಧ ಮಾಡಿದವರು ದೇಶದ್ರೋಹಿಗಳು ಎಂದು ಹೇಳುತ್ತಾರೆ. ಈಗ ಸಂವಿಧಾನವನ್ನು ವಿರೋಧ ಮಾಡುತ್ತಿರುವ ದೇಶದ್ರೋಹಿಗಳು ಯಾರು? ಪೌರತ್ವ ತಿದ್ದುಪಡಿ ಕಾಯ್ದೆಗೆ ಅಡ್ಡಿ ಮಾಡುತ್ತಿದ್ದಾರೆ" ಎಂದರು.
"ಇನ್ನೇನು ಕೆಲವೇ ದಿನಗಳಲ್ಲಿ ಅಧಿವೇಶನ ಪ್ರಾರಂಭವಾಗುತ್ತದೆ. ಸರ್ಕಾರವನ್ನು ಪ್ರಶ್ನಿಸಲು ವಿರೋಧ ಪಕ್ಷದ ನಾಯಕರೇ ಇಲ್ಲದಂತಾಗಿದೆ. ರಾಜ್ಯಾಧ್ಯಕ್ಷರನ್ನು ಮಾಡಿದ ಮರುದಿನವೇ ಕಾಂಗ್ರೆಸ್ನಲ್ಲಿ ಬಂಡಾಯ ಏಳುತ್ತದೆ. ಆಗ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗುತ್ತದೆ. ಸಿದ್ದರಾಮಯ್ಯರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದರೆ ಡಿ.ಕೆ ಶಿವಕುಮಾರ್ ಹೊರಗೆ ಹೋಗ್ತಾರೆ. ಡಿ.ಕೆ ಶಿವಕುಮಾರ್ ಅವರನ್ನು ಮಾಡಿದರೆ ಸಿದ್ದರಾಮಯ್ಯ ಹೊರಗೆ ಹೋಗುತ್ತಾರೆ, ಇಬ್ಬರನ್ನೂ ಕೂರಿಸಿ ಮಾಡಿದರೆ ಪರಮೇಶ್ವರ್ ಹೊರಗೆ ಹೋಗುತ್ತಾರೆ" ಎಂದು ಹೇಳಿದರು.