ಶ್ರೀನಗರ, ಫೆ.15 (DaijiworldNews/PY): ಸಾರ್ವಜನಿಕ ಸುರಕ್ಷತಾ ಕಾಯಿದೆ ಅಡಿ ಜಮ್ಮು-ಕಾಶ್ಮೀರದ ಆಡಳಿತವು ಮಾಜಿ ಐಎಎಸ್ ಅಧಿಕಾರಿ ಮತ್ತು ರಾಜಕಾರಣಿ ಶಾ ಫೈಸಲ್ ಅವರನ್ನು ಶನಿವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಶುಕ್ರವಾರ ರಾತ್ರಿ ಸಾರ್ವಜನಿಕ ಹಿತಾಸಕ್ತಿ ಕಾಯಿದೆ ಅಡಿ ಫೈಸಲ್ ಅವರನ್ನು ಬಂಧಿಸಲಾಗಿದೆ.
ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಅವರನ್ನು 6 ತಿಂಗಳು ಗೃಹಬಂಧನದಲ್ಲಿರಿಸಲಾಗಿತ್ತು. ಬಂಧನ ಅವಧಿ ಮುಗಿಯಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿರುವಾಗ ಫೆ.6ರ ರಾತ್ರಿ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಹೇರಿ ಬಂಧನದ ಅವಧಿ ವಿಸ್ತರಿಸಲಾಗಿದೆ.
ಕಳೆದ ವರ್ಷ ಆಗಸ್ಟ್ 13ರಂದು ಇಸ್ತಾಂಬುಲ್ಗೆ ಹೊರಟಿದ್ದ ಫೈಸಲ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ನಂತರ ಅವರನ್ನು ಶ್ರೀನಗರಕ್ಕೆ ಕಳುಹಿಸಲಾಗಿತ್ತು. ಬಳಿಕ ಸಾರ್ವಜನಿಕ ಸುರಕ್ಷತೆ ಕಾಯ್ದೆ ಅಡಿಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಕಾಶ್ಮೀರದ ಸಮಸ್ಯೆಗೆ ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದ ಐಎಎಸ್ ಅಧಿಕಾರಿ ಶಾ ಫೈಸಲ್ ಅವರು ರಾಜೀನಾಮೆ ನೀಡಿದ್ದರು.