ಹುಬ್ಬಳ್ಳಿ, ಫೆ.15 (DaijiworldNews/PY): ನಗರದ ಗೋಕುಲ ರಸ್ತೆಯ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನ ಕಾಶ್ಮಿರ ಮೂಲದ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ವಿಡಿಯೊ ವೈರಲ್ ಆಗಿದೆ.
ಈ ಮೂವರು ವಿದ್ಯಾರ್ಥಿಗಳನ್ನು ಅಮೀರ್, ಬಾಸಿತ್, ತಾಲಿಬ್ ಎಂದು ಹೇಳಲಾಗುತ್ತಿದೆ. ಈ ಮೂವರು ವಿದ್ಯಾರ್ಥಿಗಳು ಸಿವಿಲ್ ವಿಭಾಗದಲ್ಲಿ ಓದುತ್ತಿದ್ದು, ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಹೇಳಲಾಗಿದೆ. ಪುಲ್ವಾಮಾ ದಾಳಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫೆ.14 ಶುಕ್ರವಾರದಂದು ವಿದ್ಯಾರ್ಥಿಗಳು ವಿಡಿಯೊ ಮಾಡಿ ಜಾಲತಾಣದಲ್ಲಿ ಹಾಕಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಾಚಾರ್ಯ ಡಾ. ಬಸವರಾಜ ಆನಾಮಿ, ಸರ್ಕಾರಿ ಕೋಟಾದ ಅಡಿ ಮೂವರು ಕಾಶ್ಮಿರಿ ವಿದ್ಯಾರ್ಥಿಗಳು ಸೀಟು ಪಡೆದಿದ್ದರು. ವಿದ್ಯಾರ್ಥಿಗಳ ವಿಡಿಯೊ ಗಮನಿಸಿ ಪೊಲೀಸರಿಗೆ ನಾವೇ ಮಾಹಿತಿ ನೀಡಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಅಮಾನತು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಗೋಕುಲ ಠಾಣೆ ಪೊಲೀಸರು ಆಗಮಿಸಿ, ವಿದ್ಯಾರ್ಥಿಗಳಿಂದ ಹಾಗೂ ಪ್ರಾಚಾರ್ಯರಿಂದ ಮಾಹಿತಿ ಪಡೆಯುತ್ತಿದ್ದಾರೆ. ಬಜರಂಗ ದಳದ ಕಾರ್ಯಕರ್ತರು ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.