ನವದೆಹಲಿ, ಫೆ.15 (DaijiworldNews/PY): ಬಿಜೆಪಿಯ ಕೇರಳ ಘಟಕದ ನೂತನ ಅಧ್ಯಕ್ಷರನ್ನಾಗಿ ಕೆ.ಸುರೇಂದ್ರನ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶನಿವಾರ ಘೋಷಿಸಿದ್ದಾರೆ.
ಸುಮಾರು 4 ತಿಂಗಳ ಹಿಂದೆ ಆಗಿನ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರನ್ನು ಮಿಜೋರಾಂ ರಾಜ್ಯಪಾಲರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿತ್ತು. ನಂತರ ಅಧ್ಯಕ್ಷ ಸ್ಥಾನ ತೆರವಾಗಿತ್ತು.
ಸುರೇಂದ್ರನ್ ಅವರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸುಮಾರು 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ಯುವಮೋರ್ಚಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೇರಳ ಪಂಚಾಯತಿ ಚುನಾವಣೆಗೆ ಇನ್ನು ಎಂಟು ತಿಂಗಳಷ್ಟೇ ಬಾಕಿ ಇದ್ದು, ಇದು ಸುರೇಂದ್ರನ್ ಅವರ ಎದುರಿರುವ ಮೊದಲ ಸವಾಲಾಗಿದೆ. 2021ರ ಮೇನಲ್ಲಿ ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಶ್ರೀಧರನ್ ಪಿಳ್ಳೈ ರಾಜ್ಯಪಾಲರಾಗಿ ನೇಮಕಗೊಂಡ ನಂತರ ಅಧ್ಯಕ್ಷ ಹುದ್ದೆ ಖಾಲಿ ಇದ್ದುದರಿಂದ ಪಕ್ಷದ ಚಟುವಟಿಕೆಗಳಿಗೆ ಹೊಡೆತವಾಗಿತ್ತು. ಸಿಎಎ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಆಡಳಿತಾರೂಢ ಎಲ್ಡಿಎಫ್ ನಡೆಸಿದ್ದ ಪ್ರತಿಭಟನೆಗಳಿಗೆ ತಿರುಗೇಟು ನೀಡುವಲ್ಲಿ ಸಮರ್ಥ ನಾಯಕತ್ವದ ಕೊರತೆ ಬಿಜೆಪಿಗೆ ಎದುರಾಗಿತ್ತು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ತೀರ್ಪನ್ನು ಪುನರ್ ಪರಿಶೀಲಿಸಲು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಬಿಜೆಪಿ ನಡೆಸಿದ್ದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸುರೇಂದ್ರನ್ 22 ದಿನ ಜೈಲುಪಾಲಾಗಿದ್ದರು.