ಬೆಂಗಳೂರು, ಫೆ.15 (DaijiworldNews/PY): ಯಾರ ವಿಚಾರವಾಗಿಯೂ ನಾನು ಹಗುರವಾಗಿ ಮಾತನಾಡುವುದಿಲ್ಲ. ಮೊದಲು ಯಾವ ಪಕ್ಷದಲ್ಲಿ ಇದ್ದರೂ ಅದೆಲ್ಲ ಸದ್ಯಕ್ಕೆ ಬೇಡ. ಅರಣ್ಯ ಇಲಾಖೆಯ ಖಾತೆ ವಿಚಾರವಾಗಿ ನನಗೆ ತಿಳಿದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಯಾವ ಖಾತೆ ಕೊಡಬೇಕು ಎನ್ನುವುದು ಸಿಎಂ ಯಡಿಯೂರಪ್ಪನವರ ಅಧಿಕಾರ. ಅದರ ಬಗ್ಗೆ ನಾನು ಕಮೆಂಟ್ ಮಾಡುವುದಕ್ಕೆ ಹೋಗುವುದಿಲ್ಲ. ಯಾರ ವಿಚಾರವಾಗಿಯೂ ನಾನು ಹಗುರವಾಗಿ ಮಾತನಾಡಲ್ಲ. ಅವರಿಗೆ ಮಂತ್ರಿ ಸ್ಥಾನ ಕೊಡಬಾರದು ಅಂತಾ ಒತ್ತಾಯ ಮಾಡುತ್ತಾ ಇದಾರೊ ಅಥವಾ ಅರಣ್ಯ ಇಲಾಖೆಯನ್ನು ಕೊಡಬಾರದು ಅಂತಾ ವಿರೋಧ ಮಾಡುತ್ತಾ ಇದ್ದಾರೊ ನನಗೆ ತಿಳಿದಿಲ್ಲ ಎಂದರು.
ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಸಮಾವೇಶ ಮಾಡುತ್ತಿದ್ದೇವೆ. ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ರೂತ್ ಮನೋರಮಾ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಮಹಿಳಾ ಸಂಘಟನೆ ಮಾಡುತ್ತಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ಅರಮನೆ ಮೈದಾನದಲ್ಲಿ ಮಹಿಳಾ ಸಮಾವೇಶ ಮಾಡುತ್ತಿದ್ದೇವೆ. ರೂತ್ ಮನೊರಮಾ ಅವರಿಗೆ ದೇಶ ವಿದೇಶದಲ್ಲಿ ಸಾಮಾಜಿಕ ಕೆಲಸ ಮಾಡಿರುವ ಅನುಭವ ಇದೆ. ಲೀಲಾವತಿ ಆರ್.ಪ್ರಸಾದ್ಗೆ ಅನಾರೋಗ್ಯದ ಕಾರಣ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆಗಿ ಮುಂದುವರಿಯಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ತಕ್ಷಣವೇ ಮಹಿಳಾ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡುತ್ತೇವೆ ಎಂದು ತಿಳಿಸಿದರು.
ಲಲಿತಾ ನಾಯ್ಕ್ ಕೆಲವು ಕಾರಣಾಂತರಗಳಿಂದ ವಿಧಾನಸಭೆ ಚುನಾವಣೆಯಲ್ಲಿ ಸೋತರು. ಅವರು ಸ್ವಂತ ಖರ್ಚಿನಲ್ಲಿ ಪಕ್ಷ ಸಂಘಟನೆ ಮಾಡಿದರು. ಆದರೆ ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ನಾನು ಈಗ ರಾಜ್ಯಸಭೆಗೂ ಹೋಗುವ ಆಸಕ್ತಿ ಹೊಂದಿಲ್ಲ. ಹೀಗಾಗಿ ನಾನು ಇಲ್ಲೇ ಇದ್ದು ಪಕ್ಷ ಸಂಘಟನೆ ಮಾಡುವ ಕಾರ್ಯ ಮಾಡುತ್ತೇನೆ ಎಂದರು.
ಪಕ್ಷ ಕಟ್ಟುವ ಅನುಭವ ಇದೆ. ಸೋತರೂ, ಗೆದ್ದರೂ ಹೋರಾಟ ಮಾಡುತ್ತೇನೆ. ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ದುಡಿಯಬೇಕೆಂಬ ಆಶಯ ಹೊಂದಿದ್ದೇನೆ. ಆರ್. ಅಶೋಕ್ ಮಗನನ್ನು ರಕ್ಷಿಸುವಲ್ಲಿ ಪೋಲಿಸರ ಕೈವಾಡ ವಿಚಾರ ನನಗೆ ಗೊತ್ತಿಲ್ಲ. ಹೋರಾಟ ಮಾಡುವುದಕ್ಕೆ ಅನೇಕ ವಿಷಯಗಳಿವೆ.ಅವುಗಳನ್ನು ಮುಂದಿಟ್ಟು ಹೋರಾಟ ಮಾಡುತ್ತೇನೆ.ನಾನು ಇಂತಹ ವಿಚಾರಗಳ ವಿಚಾರವಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ನಾರಾಯಣ ಮೂರ್ತಿ ಅಳಿಯನ ಜೊತೆಯಲ್ಲಿ ಇನ್ನೂ ಇಬ್ಬರು ಅಮೆರಿಕ ದೇಶದ ಸಚಿವರಾಗಿರುವುದು ಸಂತೋಷದ ವಿಷಯ. ಅವರಿಗೆಲ್ಲ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.