ತಿರುವನಂತಪುರ , ಫೆ.15 (DaijiworldNews/PY): ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಸಂಬಂಧ, ನ್ಯಾಯಾಲಯಕ್ಕೆ ಹಾಜರಾಗಿ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಖ್ಯ ಮ್ಯಾಜಿಸ್ಟ್ರೇಟ್ ಸಮನ್ಸ್ ಜಾರಿ ಮಾಡಿದ್ದಾರೆ.
ದೂರಿನ ವಿಚಾರವಾಗಿ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡಿರುವ ಮುಖ್ಯ ಮ್ಯಾಜಿಸ್ಟ್ರೇಟ್, ಮೇ 2ರ ಒಳಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ರವಿಶಂಕರ್ ಪ್ರಸಾದ್ ಅವರಿಗೆ ಸೂಚಿಸಿದ್ದಾರೆ ಎಂದು ತರೂರ್ ಪರ ವಕೀಲರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ತಮ್ಮ ಪತ್ನಿ ಸುನಂದಾ ಪುಷ್ಕರ್ ಅವರ ಸಾವಿಗೆ ಸಂಬಂಧಿಸಿ ರವಿಶಂಕರ್ ಪ್ರಸಾದ್ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ, 2018ರ ಡಿಸೆಂಬರ್ನಲ್ಲಿ ತರೂರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ತಮ್ಮನ್ನು ಕೊಲೆ ಆರೋಪಿ ಎಂದು ಕರೆದಿದ್ದಕ್ಕಾಗಿ ರವಿಶಂಕರ್ ಪ್ರಸಾದ್ ಷರತ್ತುರಹಿತ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ತರೂರ್ ಅವರು ಈ ಮೊದಲು ನೋಟಿಸ್ ಕಳುಹಿಸಿದ್ದರು. ಪುಷ್ಕರ್ ಸಾವಿನ ಪ್ರಕರಣದಲ್ಲಿ ದೆಹಲಿ ಪೊಲೀಸರು ನೀಡಿರುವ ಅಂತಿಮ ವರದಿಯಲ್ಲಿ, ಈ ಸಾವು ಕೊಲೆಯಲ್ಲ ಎಂದು ಉಲ್ಲೇಖಿಸಲಾಗಿದೆ ಎಂದೂ ತರೂರ್ ತಿಳಿಸಿದ್ದರು.