ವಾರಾಣಸಿ, ಫೆ 16 (Daijiworld News/MB) : ಪ್ರಧಾನಿ ನರೇಂದ್ರ ಮೋದಿಯವರು ದತ್ತು ಪಡೆದಿರುವ ವಾರಾಣಸಿ ಜಿಲ್ಲೆಯ ಡೋಮ್ರಿ ಹಳ್ಳಿಯಲ್ಲಿ ಇತ್ತೀಚೆಗೆ ವಿವಾಹವಾದ ನವಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಷಯ ಪತ್ರ ಕಳುಹಿಸಿದ್ದಾರೆ.
ಇತ್ತೀಚೆಗೆ ವೃತ್ತಿಯಲ್ಲಿ ಸೈಕಲ್ ರಿಕ್ಷಾ ತುಳಿಯುವ ಮಂಗಳ್ ಕೇವಟ್ ಎಂಬವರು ತಮ್ಮ ಪುತ್ರಿಯ ವಿವಾಹವನ್ನು ಮಾಡಿದ್ದರು. ಆ ವಿವಾಹಕ್ಕೂ ಮುನ್ನ ವಿವಾಹ ಆಮಂತ್ರಣ ಪತ್ರಿಕೆಯನ್ನು ಮೋದಿಯವರಿಗೆ ಕಳುಹಿಸಿದ್ದರು.
ಆದರೆ, ಮೋದಿಯವರಿಗೆ ವಿವಾಹಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ ಅದಕ್ಕೆ ಬದಲಾಗಿ ಶುಭಾಷಯ ಪತ್ರ ಕಳುಹಿಸಿದ್ದು, ಅದು ಶನಿವಾರ ಮಂಗಳ್ರವರ ಕುಟುಂಬ ತಲುಪಿದೆ.
ಈ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳ್, "ನಾನು ನನ್ನ ಕೆಲವು ಸ್ನೇಹಿತರ ಸಲಹೆಯ ಮೇರೆಗೆ ಪ್ರಧಾನಿ ಯವರಿಗೆ ಆಮಂತ್ರಣ ಕಳುಹಿಸಿದ್ದೆ. ಈಗ ಅವರು ಆ ಆಮಂತ್ರಣ ಪತ್ರಕ್ಕೆ ಪ್ರತಿಯಾಗಿ ಶುಭಾಷಯ ಕಳುಹಿಸಿದ್ದಾರೆ. ಇದರಿಂದ ನನಗೆ ಬಹಳ ಸಂತೋಷವಾಗಿದೆ. ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ" ಎಂದು ಹೇಳಿದ್ದಾರೆ.