ನವದೆಹಲಿ, ಫೆ 16 (Daijiworld News/MB) : ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ 70 ಸ್ಥಾನಗಳ ಪೈಕಿ 62 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಇಂದು ಬೆಳಿಗ್ಗೆ 10 ಗಂಟೆಗೆ ಐತಿಹಾಸಿಕ ರಾಮ್ ಲೀಲಾ ಮೈದಾನದಲ್ಲಿ ಸತತ ಮೂರನೇ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಂದು ರಾಮ್ ಲೀಲಾ ಮೈದಾನದಲ್ಲಿ ಧನ್ಯವಾದಗಳು ದೆಹಲಿ ಎಂದು ಬರೆದಿರುವ ಹಲವಾರು ಬ್ಯಾನರ್ಗಳು ರಾರಾಜಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದೆ ಎಂದು ಹಿರಿಯ ಆಪ್ ಪಕ್ಷದ ಮುಖ್ಯಸ್ಥ ಗೋಪಾಲ್ ರೈ ತಿಳಿಸಿದ್ದಾರೆ.
ಹಿಂದಿನ ಕೇಜ್ರಿವಾಲ್ ನೇತೃತ್ವದ ಸರ್ಕಾರದ ಎಲ್ಲ ಆರು ಮಂತ್ರಿಗಳಾದ ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೇನ್ ಮತ್ತು ರಾಜೇಂದ್ರ ಗೌತಮ್ ಸಹ ಭಾನುವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೂ ಆಹ್ವಾನ ನೀಡಿದ್ದು ಆದರೆ ಪ್ರಧಾನಿ ಭಾನುವಾರ ತಮ್ಮ ತವರು ಕ್ಷೇತ್ರವಾದ ವಾರಣಾಸಿಯಲ್ಲಿರುತ್ತಾರೆ ಎಂದು ವರದಿ ತಿಳಿಸಿದೆ.