ಅಹಮದಾಬಾದ್, ಫೆ 16 (Daijiworld News/MB) : "ಸಮಾಜದಲ್ಲಿ ಹಿಂಸಾಚಾರ ಮತ್ತು ಅಸಮಾಧಾನ ಹೆಚ್ಚುತ್ತಿದ್ದು ಮೂರನೇ ಮಹಾಯುದ್ಧದ ಭೀತಿ ಹೆಚ್ಚುತ್ತಿದೆ" ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಅಹಮದಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಈಗಾಗಲೇ ಎರಡು ವಿಶ್ವ ಯುದ್ಧಗಳು ನಡೆದಿದೆ. ಈಗ ಮೂರನೇ ವಿಶ್ವ ಯುದ್ಧದ ಭೀತಿ ಕಾಡುತ್ತಿದೆ. ಈ ಮೂರನೇ ವಿಶ್ವ ಯುದ್ಧದ ಹಿಂದೆ ಹಿಂಸೆ ಮತ್ತು ಅಸಮಾಧಾನವಿದೆ. ಯಾರೂ ಕೂಡ ಸಂತುಷ್ಟರಾಗಿಲ್ಲ. ಮಾಲೀಕರು, ಕಾರ್ಮಿಕರು, ಸರ್ಕಾರ, ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರು, ಎಲ್ಲರೂ ಆಂದೋಲನ ನಡೆಸುತ್ತಿದ್ದಾರೆ" ಎಂದು ಹೇಳಿದರು.
"ಅಭಿವೃದ್ಧಿ ಹೊಂದಿದ ಜಗತ್ತಿನಲ್ಲಿ ನಾವೀಗ ಇದ್ದೇವೆ. ಈಗ ದಶಕದ ಹಿಂದೆ ಸಿಗದ ಎಲ್ಲಾ ಸೌಲಭ್ಯಗಳು ದೊರೆಯುತ್ತಿದೆ. ಆದರೂ ಪ್ರತಿಭಟನೆ ನಡೆಯುತ್ತಿವೆ. ಹೀಗಾದಲ್ಲಿ ಮುಂದಿನ 100 ವರ್ಷಗಳಲ್ಲಿ ಆಗುವ ಬದಲಾವಣೆಗಳನ್ನು ಊಹಿಸಲು ಸಾಧ್ಯವಾಗದು. ಪಾಣಿಪತ್ ಕದನದಲ್ಲಿ ಏನಾಯಿತು ? ಮರಾಠರು ಗೆಲುವನ್ನು ಪಡೆದರೆ ಅಥವಾ ಸೋಲನುಭವಿಸಿದರೆ ? ಈ ಸುದ್ದಿ ಪೂನಾವನ್ನು ತಲುಪಲು ಅಂದು ಒಂದು ತಿಂಗಳು ಯಾಕಾಯಿತು. ಆದರೇ ಈ ಕಾಲದಲ್ಲಿ ಹಾಗಿಲ್ಲ. ಒಂದು ಈ ಮೇಲ್ ಕಳುಹಿಸಿದರೆ ಸೆಕೆಂಡ್ ಗಳಲ್ಲಿ ಉತ್ತರ ಬರುತ್ತದೆ" ಎಂದರು.
ಧರ್ಮಾಂಧತೆ, ಹಿಂಸೆ ಮತ್ತು ಭಯೋತ್ಪಾದನೆ ಪ್ರಸ್ತುತ ಜಗತ್ತಿನಲ್ಲಿ ಹೆಚ್ಚಾಗುತ್ತಿದೆ. ಮಾನವರು ರೋಬೋಟ್ಗಳಾಗುವುದನ್ನು ತಡೆಯಬೇಕು ಎಂದರು.