ಭೋಪಾಲ್ , ಫೆ.16 (DaijiworldNews/PY): "ದೇಶದ ಆಡಳಿತದಲ್ಲಿ ಮೂಗು ತೂರಿಸುವ ಮೂಲಕ ವಿದೇಶಿ ಮಹಿಳೆಗೆ ಹುಟ್ಟಿದ ಮಗನಿಂದ ದೇಶ ಈಗಾಗಲೇ ಸಾಕಷ್ಟು ದುಷ್ಪರಿಣಾಮ ಎದುರಿಸುತ್ತಿದೆ" ಎಂದು ಮಧ್ಯ ಪ್ರದೇಶದ ಮಂಡ್ಸೌರ್ ಕ್ಷೇತ್ರದ ಬಿಜೆಪಿ ಸಂಸದ ಸುಧೀರ್ ಗುಪ್ತ ಹೇಳಿದ್ದಾರೆ.
ಪುಲ್ವಾಮಾ ಭಯೋತ್ಪಾದಕ ದಾಳಿ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ಗೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ದಿವಂಗತ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಹತ್ಯೆ ವಿಚಾರವಾಗಿ ನೀಡಿದ್ದ ಹೇಳಿಕೆ ವಿವಾದವಾಗಿದ್ದು ಇದೀಗ ಮತ್ತೊಬ್ಬ ಬಿಜೆಪಿ ಸಂಸದರು ಕೂಡ ಅದೇ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಧ್ಯ ಪ್ರದೇಶದ ಮಂಡ್ಸೌರ್ ಕ್ಷೇತ್ರದ ಬಿಜೆಪಿ ಸಂಸದ ಸುಧೀರ್ ಗುಪ್ತ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಮದುವೆ ವಿಚಾರವಾಗಿ ಟೀಕಿಸಿದ್ದು, "ದೇಶದ ಆಡಳಿತದಲ್ಲಿ ಮೂಗು ತೂರಿಸುವ ಮೂಲಕ ವಿದೇಶಿ ಮಹಿಳೆಗೆ ಹುಟ್ಟಿದ ಮಗನಿಂದ ದೇಶ ಈಗಾಗಲೇ ಸಾಕಷ್ಟು ದುಷ್ಪರಿಣಾಮ ಎದುರಿಸುತ್ತಿದೆ" ಎಂದಿದ್ದಾರೆ.
ಫೆ.15 ಶನಿವಾರದಂದು ಮಂಡಸೌರ್ ಕ್ಷೇತ್ರದಲ್ಲಿ ಪತ್ರಕರ್ತರು ರಾಹುಲ್ ಗಾಂಧಿ ಟ್ವೀಟ್ ವಿಚಾರವಾಗಿ ಸುಧೀರ್ ಗುಪ್ತ ಅವರನ್ನು ಕೇಳಿದಾಗ, "ರಾಹುಲ್ ಗಾಂಧಿ ಅವರು ನಮ್ಮ ದೇಶದವರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಇಡೀ ದೇಶ ಸ್ಮರಿಸುತ್ತಿರುವಾಗ ರಾಹುಲ್ ಗಾಂಧಿಯವರು ಮಾತ್ರ ನಾಚಿಕೆಯಿಲ್ಲದೇ ದಾಳಿ ವಿಚಾರವಾಗಿ ಪ್ರಶ್ನೆ ಕೇಳುತ್ತಾರೆ" ಎಂದರು.
"ರಾಹುಲ್ ಗಾಂಧಿ ಹಾಗೂ ಅವರ ಪಕ್ಷದ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಪುಲ್ವಾಮಾ ದಾಳಿಯಿಂದ ಯಾರಿಗೆ ಲಾಭವಾಗಿದೆ ಎಂದು ಕೇಳುತ್ತಾರೆ. ಹಾಗಾದರೆ ಇಟಲಿಯನ್ ಮಹಿಳೆ ಹಾಗೂ ಭಾರತೀಯನ (ರಾಜೀವ್ ಗಾಂಧಿ-ಸೋನಿಯಾ ಗಾಂಧಿ)ನಡುವೆ ಮದುವೆ ಆಗಿದ್ದಕ್ಕೆ ಯಾರಿಗೆ ಲಾಭವಾಗಿದೆ ಎಂದು ನಾವು ಕೇಳಬೇಕಾಗುತ್ತದೆ. ಇವರಿಬ್ಬರ ಮದುವೆಯಿಂದ ದೇಶಕ್ಕೆ ಕನಿಷ್ಠ ಲಾಭವಾಗಿದೆಯೇ" ಎಂದು ಕೇಳಿದರು.