ಹುಬ್ಬಳ್ಳಿ, ಫೆ 16 (Daijiworld News/MB) : ನಾನು ಹಾಗೂ ನಮ್ಮ ಪಕ್ಷ ರಾಜಕೀಯದಲ್ಲಾದ ಅನೇಕ ಬದಲಾವಣೆಗಳಿಂದ ನೆಲಕಚ್ಚಿದೆ. ಮರಳಿ ಅಧಿಕಾರ ಹೇಗೆ ಪಡೆಯಬೇಕು ಎಂಬುದು ನನಗೆ ಗೊತ್ತಿದೆ. ಈ ನಿಟ್ಟಿನಲ್ಲಿ ಯತ್ನ ಆರಂಭವಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೆಗೌಡ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾನು ಸೋತಿದ್ದೇನೆ. ಪಕ್ಷವೂ ಸೋತಿದೆ. ಮುಂಬರುವ ತಾಲ್ಲೂಕು, ಜಿಲ್ಲಾ ಮಟ್ಟದ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಸೋತ ಮಾತ್ರಕ್ಕೆ ದೇವೇಗೌಡರ ಹುಮ್ಮಸ್ಸು ಮುಗಿದು ಹೋಗಿದೆ ಎಂದು ಭಾವಿಸಬೇಡಿ. ಜೀವನಪೂರ್ತಿ ಹೋರಾಟದ ಹಾದಿಯಲ್ಲಿಯೇ ಬಂದ ನನಗೆ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಗುರಿಯಿದೆ. ಪ್ರಾದೇಶಿಕ ಪಕ್ಷವನ್ನು ಮುಗಿಸಬೇಕು ಎಂದು ಅಂದುಕೊಂಡವರೇ ಅಚ್ಚರಿಯಾಗುವ ರೀತಿಯಲ್ಲಿ ಹೋರಾಟ ಮಾಡುತ್ತೇನೆ ಎಂದರು.
ಪಕ್ಷವನ್ನು ಮೊದಲು ತಳಮಟ್ಟದಿಂದ ಸಂಘಟನೆ ಮಾಡುತ್ತೇವೆ. ಅದಕ್ಕಾಗಿ ಒಂಬತ್ತು ಸದಸ್ಯರನ್ನು ಒಳಗೊಂಡ ಕೋರ್ ಕಮಿಟಿ ರಚನೆ ಮಾಡಲಾಗಿದ್ದು, ಈ ಕಮಿಟಿಯಲ್ಲಿ ಪಕ್ಷದ ನಾಯಕರು ಇರುತ್ತಾರೆ. ಅವರು ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಹೋಗಿ ಪಕ್ಷವನ್ನು ಬಲಗೊಳಿಸುತ್ತಾರೆ" ಎಂದು ಹೇಳಿದರು.
ನನಗೆ ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಲು ಇಚ್ಛೆಯಿರಲಿಲ್ಲ. ಕೇಂದ್ರದ ಕಾಂಗ್ರೆಸ್ ನಾಯಕರಿಗೆ ನಾನು ಈ ವಿಷಯವನ್ನು ಅತ್ಯಂತ ಕಠಿಣವಾಗಿ ಹೇಳಿದ್ದೆ. ಮುಖ್ಯಮಂತ್ರಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮಾಡಿ ಎಂದು ಹೇಳಿದ್ದೆ. ಇದಕ್ಕೆ ಗುಲಾಂ ನಬಿ ಆಜಾದ್ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರೇ ಒಪ್ಪಿಗೆ ನೀಡಿಲ್ಲ. ಬೇಡವೆಂದರೂ ನನ್ನ ಮಗನನ್ನೇ ಮುಖ್ಯಮಂತ್ರಿ ಮಾಡಿದರು ಎಂದರು.
ಯಾರು ಬಿಜೆಪಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ನ ಶಾಸಕರನ್ನು ಕರೆದುಕೊಂಡು ಹೋದದ್ದು ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಇದನ್ನು ಪಕ್ಷಗಳಿಂದ ಹೋದವರೇ ಬಹಿರಂಗವಾಗಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಜಾರಿಗೆ ತಂದಿದ್ದ ಯೋಜನೆಗಳನ್ನು ಈಗಿನ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ರದ್ದು ಮಾಡುತ್ತಿದೆ. ಹಳೇ ದ್ವೇಷವನ್ನು ಮುಂದಿಟ್ಟುಕೊಂಡು ಬಿಜೆಪಿ ತಾರತಮ್ಯ ಮಾಡಿದರೆ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ ಎಂದು ಸಿಡಿಮಿಡಿಗೊಂಡರು.
ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ರಾಜ್ಯದಲ್ಲಿ ನಮ್ಮಲ್ಲಿದ್ದ ಪ್ರಮುಖ ನಾಯಕರೇ ಕಾಂಗ್ರೆಸ್ಗೆ ಸೇರಿದರು. ರಾಹುಲ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ಸಿಗರು ನನ್ನ ವಿರುದ್ಧವೇ ಅನೇಕ ಬಾರಿ ಅಪಪ್ರಚಾರ ಮಾಡಿದರು. ಆದರೂ ಕಾಂಗ್ರೆಸ್ಗೆ ಈಗ ಎದುರಾಗಿರುವ ಪರಿಸ್ಥಿತಿಯ ಬಗ್ಗೆ ಅನುಕಂಪವಿದೆ ಎಂದರು.