ಚಿಕ್ಕಬಳ್ಳಾಪುರ, ಫೆ 16 (Daijiworld News/MB) : ಕೇಂದ್ರದಿಂದ ಜಾರಿ ನಿರ್ದೇಶನಾಲಯ(ಇಡಿ) ದಾಳಿ ಮಾಡಿಸಿದರೆ ಅದನ್ನು ರಾಜಕಾರಣ ಎಂದು ಹೇಳುತ್ತಾರೆ. ಹಾಗಾಗಿ ನರೇಂದ್ರ ಮೋದಿಯವರನ್ನು ಹಿಡಿದು ಎಲ್ಲಾ ರಾಜಕಾರಣಿಗಳ ನಿವಾಸದ ಮೇಲೂ ದಾಳಿಯಾಗಬೇಕು ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ, "ಬಾಡೂಟ ಹಾಕಿದರೆ ಸಾಕು ಜನರು ಓಟು ಹಾಕುತ್ತಾರೆ. ಆದರೆ ದುಡ್ಡಿರದ ಪ್ರಾಮಾಣಿಕ ರಾಜಕಾರಣಿಗೆ ಅವಕಾಶ ಇದೆಯಾ ಎಂದು ಪ್ರಶ್ನಿಸಿದರು.
ಅಷ್ಟು ಮಾತ್ರವಲ್ಲದೇ ಕೋಟಿಗಟ್ಟಲೇ ಖರ್ಚು ಮಾಡಿ ಅದರ ಬಂಡವಾಳ ಸಮೇತ ರಾಜಕಾರಣಿಗಳು ಹಿಂದಕ್ಕೆ ಪಡೆಯುತ್ತಾರೆ. ದೇಶದ ಎಲ್ಲಾ ಕಡೆಗಳಲ್ಲಿ ಆ ರೀತಿ ನಡೆಯಲ್ಲ. ಆದರೆ ಕರ್ನಾಟಕ ನಂಬರ್ ಒನ್ ಆಗಿದೆ, ಇಲ್ಲಿಯ ಜನರು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರದಿಂದ ಇಡಿ ದಾಳಿ ನಡೆಸಿದ್ದಲ್ಲಿ ರಾಜಕಾರಣ ಎಂದು ಹೇಳುತ್ತಾರೆ. ಆ ಹಿನ್ನಲೆಯಲ್ಲಿ ನರೇಂದ್ರ ಮೋದಿ ಸಹಿತ ಎಲ್ಲಾ ರಾಜಕಾರಣಿಗಳ ನಿವಾಸದಲ್ಲಿ ಈಡಿ ರೈಡ್ ಆಗಬೇಕು. ರಾಜಕಾರಣ ವ್ಯಾಪರದಂತೆ ಆಗಿಹೋಗಿದೆ. ಇದರಲ್ಲಿ ನಮ್ಮ ಪಕ್ಷವೂ ಸೇರಿದೆ. ರಾಜಕಾರಣದಲ್ಲಿ ಶೇ.25 ಒಳ್ಳೆಯವರಿದ್ದಾರೆ. ಆದರೆ ಅವರು ಶೇ.75ರಲ್ಲಿ ಸೇರಿ ಕೆಟ್ಟವರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.