ಬೆಂಗಳೂರು, ಫೆ.16 (DaijiworldNews/PY): "ನಾನು ಬಸವ ತತ್ವಗಳನ್ನು ಅನುಸರಿಸುವವನು ಹಾಗೂ ಅವರ ಪ್ರಬಲ ಸಿದ್ದಾಂತಗಳ ಪ್ರತಿಪಾದಕನಾಗಿದ್ದೇನೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಅಸಂಖ್ಯ ಪ್ರಮಥರ ಗಣಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ವೈದಿಕ ಧರ್ಮಕ್ಕೆ ಪರ್ಯಾಯವಾಗಿ, ವೈಚಾರಿಕವಾಗಿ, ಧರ್ಮಾತೀತವಾಗಿ ಹಾಗೂ ಜಾತ್ಯತೀತ, ಕರ್ಮ ಸಿದ್ಧಾಂತ, ಕಂದಾಚಾರ, ಮೌಢ್ಯಗಳನ್ನು ದೂರವಿಟ್ಟ ಧರ್ಮ ಎಂದರೆ ಅದು ಬಸವಾದಿ ಶಿವಶರಣರ ಲಿಂಗಾಯತ ಧರ್ಮ" ಎಂದು ತಿಳಿಸಿದರು.
"900 ವರ್ಷಗಳ ಬಳಿಕ ಜಗತ್ತಿನ ಸಾಮಾಜಿಕ ವ್ಯವಸ್ಥೆಗೆ ಪರಿವರ್ತನೆಗೆ ಇಂತಹ ಸಮಾವೇಶಗಳು ಪ್ರಸ್ತುತ ಹಾಗೂ ಅವಶ್ಯಕ. ಬಸವಣ್ಣನವರ ಕಾಲದಲ್ಲಿ ಮಾಡಿದ ಅಸಂಖ್ಯ ಪ್ರಮಥರ ಗಣಮೇಳವನ್ನು ಇಂದು ಶಿವಮೂರ್ತಿ ಶರಣರು ಮರುಕಳಿಸಿದ್ದಾರೆ. ಇಡೀ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ" ಎಂದು ಹೇಳಿದರು.
"ಜಾತಿ ವ್ಯವಸ್ಥೆಯನ್ನು, ಅಸಮಾನತೆಯನ್ನು ತೊಡೆದು ಹಾಕಿ ಲೋಕಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ನಮ್ಮ ದೇಶ ಅನೇಕ ಜನ ಸಮಾಜ ಸುಧಾರಕರನ್ನು, ದಾರ್ಶನಿಕರನ್ನು, ಸಂತರನ್ನು, ಶರಣರನ್ನು, ಸೂಫಿಗಳನ್ನು ನೀಡಿದೆ. ಅವರೆಲ್ಲಾ ಸಮಾಜದ ಪರಿವರ್ತನೆಗೆ, ಬದಲಾವಣೆಗೆ, ಮಾನವೀಯ ಮೌಲ್ಯಗಳ ಸ್ಥಾಪನೆಗೆ ಶತಮಾನಗಳಿಂದ ಪ್ರಯತ್ನ ಮಾಡುತ್ತಾ ಬಂದಿದ್ದಾರೆ" ಎಂದು ತಿಳಿಸಿದರು.
"ನುಡಿದಂತೆ ನಡೆದವರು ಬಸವಾದಿ ಶರಣರು. ಸಮಾಧಾನಕರವಾಗಿ ಬಾಳಿದರೆ ಅದು ಸಾರ್ಥಕ. ಇಲ್ಲದಿದ್ದರೆ ನಿರರ್ಥಕ ಎಂದರು. ನಮ್ಮ ಸಂವಿಧಾನದಲ್ಲಿ ಭೇದ ಭಾವಗಳಿಗೆ ಆಸ್ಪದವಿಲ್ಲ. ಅದು ಧರ್ಮ ನಿಷ್ಠೆ ಹಾಗೂ ಪರಧರ್ಮ ಸಹಿಷ್ಣುತೆ ಸಾರುತ್ತದೆ. ಇದರಲ್ಲಿ ಅಗೌರವ, ಅಸಮಾನತೆಗೆ ಆಸ್ಪದವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇವನಾರವ ಇವನಾರವ ಎಂದು ಕೇಳುತ್ತಿರುವ ಇಂದಿನ ದಿನಗಳಲ್ಲಿ ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ವಚನಗಳು ಪಠಣ ಮಾಡಲಿಕ್ಕೆ ಅಲ್ಲ" ಎಂದರು.
"ಶಿವಮೂರ್ತಿ ಮುರುಘಾ ಶರಣರು ನನಗೆ ನೈತಿಕ ಸ್ಥೈರ್ಯ ತುಂಬಿದ ಸ್ವಾಮೀಜಿಗಳ ಸಾಲಿನಲ್ಲಿ ಮೊದಲಿಗರು. ನನ್ನ ಅಹಿಂದ ಸಮಾವೇಶಗಳ ಕಾಲದಿಂದಲೂ ಅವರು ನನಗೆ ಶಕ್ತಿ ತುಂಬಿದವರು. ಅವರನ್ನು ಮರೆಯಲು ಸಾಧ್ಯವಿಲ್ಲ" ಎಂದು ಹೇಳಿದರು.
"ಅಸಮಾನತೆ, ಬಡತನ, ಭೇದ-ಭಾವ, ತಾರತಮ್ಯ, ಸಾಮಾಜಿಕ ಅಸಮಾನತೆ ಇದೆ. ಯಾಕೆ ಸಮಾನತೆ ಬಂದಿಲ್ಲ ಎಂದರೆ, ಜಾತಿ ವ್ಯವಸ್ಥೆ ಅದಕ್ಕೆ ಅಡ್ಡಿಯಾಗಿದೆ. ಅದಕ್ಕೆ ಚಲನೆ ನೀಡಬೇಕಿದೆ. ಇಂದು ಎಲ್ಲೆಡೆ ಜಾತಿ ವ್ಯವಸ್ಥೆ ಗಟ್ಟಿಯಾಗಿ ಕೂತಿದೆ. ಇದನ್ನು ಹೋಗಲಾಡಿಸಬೇಕಾದರೆ ಇಂತಹ ಪ್ರಯತ್ನ ಪ್ರಶಂಸನೀಯ" ಎಂದರು.