ಬೆಳಗಾವಿ, ಫೆ.16 (DaijiworldNews/PY): "ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಶಿವ ಸೇನೆಯು ಅನಗತ್ಯವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದ ವಿಷಯದಲ್ಲಿ ಖ್ಯಾತೆ ತೆಗೆಯುತಿದ್ದು, ಮಹಾಜನ್ ವರದಿಯೇ ಅಂತಿಮ. ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದ ಮುಗಿದ ಅಧ್ಯಾಯ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಖಾನಾಪುರ ತಾಲೂಕಿನ ಬೋಗುರ ಗ್ರಾಮದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟ 6 ಜನರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ ಹಿತ ಕಾಪಾಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ಹಿಂದೆ ಬೀಳುವುದಿಲ್ಲ. ಮಹಾರಾಷ್ಟ್ರದಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಗಡಿವಿವಾದದ ವಿಚಾರವನ್ನು ಕೆಣುಕುತ್ತಿರುವ ಮಹಾ ಸರ್ಕಾರದ ನಡೆಗೆ ಯಾವುದೇ ಅರ್ಥವಿಲ್ಲ" ಎಂದರು.
"ರಾಜ್ಯದ ಸರ್ವತೋಮುಖ ಏಳಿಗೆಗಾಗಿ ಹಾಗೂ ಯುವ ಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಇದೇ ಮೊದಲ ಬಾರಿಗೆ ಇನ್ವೆಸ್ಟ್ ಕರ್ನಾಟಕ ಮೇಳ ಆಯೋಜಿಸಿ ಸಾವಿರಾರು ಕೋಟಿ ಬಂಡವಾಳದ ಉದ್ಯಮ ಆರಂಭಿಸಲು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಉದ್ಯಮಿಗಳನ್ನು ಆಹ್ವಾನಿಸಿ 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆ ಅವಕಾಶ ನೀಡಲಾಗಿದೆ" ಎಂದು ತಿಳಿಸಿದರು.
"ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಉತ್ತೇಜನ ನೀಡಿರುವ ವಿಚಾರವಾಗಿ ಅಭಿಮಾನ ವ್ಯಕ್ತಪಡಿಸಬೇಕಿತ್ತು. ಈ ಮೇಳದಲ್ಲಿ ಹಾವೇರಿ, ದಾವಣಗೆರೆ, ಯಾದಗಿರಿ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉದ್ಯಮ ಆರಂಭಿಸಲು 50ಕ್ಕೂ ಹೆಚ್ಚು ಕಂಪನಿಗಳು ಸಿದ್ದವಾಗಿವೆ" ಎಂದರು.