ನವದೆಹಲಿ, ಫೆ.16 (DaijiworldNews/PY): "ಪೊಲೀಸರು ಯಾರಿಗೂ ಶತ್ರುಗಳಲ್ಲ, ಅವರು ನಮ್ಮ ಸ್ನೇಹಿತರೇ, ಅವರನ್ನು ಗೌರವಿಸಲು ಮರೆಯದಿರಿ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಭಾನುವಾರ ದೆಹಲಿ ಪೊಲೀಸರು 73ನೇ ರೈಸಿಂಗ್ ದಿನಾಚರಣೆ ಭಾಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಜಾತಿ ಮತ್ತು ಧರ್ಮ ಎನ್ನದೇ ದೇಶದಲ್ಲಿ ಶಾಂತಿ ಮತ್ತು ಸುರಕ್ಷತೆ ಕಾಪಾಡುವ ಪೊಲೀಸರನ್ನು ಗೌರವಿಸುವ ಅಗತ್ಯವಿದೆ. ಪೊಲೀಸರು ಯಾರಿಗೂ ಶತ್ರುಗಳಲ್ಲ, ಅವರು ನಮ್ಮ ಸ್ನೇಹಿತರೇ, ಅವರನ್ನು ಗೌರವಿಸಲು ಮರೆಯದಿರಿ" ಎಂದು ತಿಳಿಸಿದ್ದಾರೆ.
"ದೇಶಕ್ಕಾಗಿ ಪೊಲೀಸರು ಹಗಲು ರಾತ್ರಿಯೆನ್ನದೇ ದುಡಿಯುತ್ತಾರೆ. ಅವರು ಯಾರಿಗೂ ಶತ್ರುಗಳಲ್ಲ. ಅಗತ್ಯವಿದ್ದಾಗ ನಮ್ಮ ಸಹಾಯಕ್ಕೆ ಬರುತ್ತಾರೆ. ಅವರು ನಮ್ಮ ಸ್ನೇಹತರೇ. ಹಾಗಾಗಿ ನಾವು ಅವರಿಗೆ ಗೌರವ ಕೊಡಬೇಕು. ಇಲ್ಲಿಯವರೆಗೆ ದೇಶಕ್ಕಾಗಿ 35 ಸಾವಿರಕ್ಕೂ ಹೆಚ್ಚು ಪೊಲೀಸರು ಪ್ರಾಣತ್ಯಾಗ ಮಾಡಿದ್ದಾರೆ. ಅವರು ದೇಶವನ್ನು ರಕ್ಷಿಸುವಲ್ಲಿ ಪ್ರಮುಖರು ಎಂಬ ಸತ್ಯವನ್ನು ನಾವು ನಿರ್ಲಕ್ಷಿಸಬಾರದು" ಎಂದರು.
"ಮಹಿಳೆಯರ ಸುರಕ್ಷತೆಗಾಗಿ 9300 ಸಿಸಿಟಿವಿಗಳನ್ನು ಅಳವಡಿಸಲು ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದ್ದು, ವಿವಿಧ ಹಂತಗಳಲ್ಲಿ ಪೊಲೀಸರಿಗೆ 4,500 ನಾಲ್ಕುಚಕ್ರ ಹಾಗೂ 1600 ದ್ವಿಚಕ್ರ ವಾಹನಗಳನ್ನು ನೀಡಲಾಗುತ್ತದೆ" ಎಂದು ತಿಳಿಸಿದರು.