ರಾಯಚೂರು, ಫೆ.16 (DaijiworldNews/PY): "ಕಪ್ಪು ಹಣ ಪುನಃ ತರುತ್ತೇನೆ ಎಂದವರು ಕಪ್ಪು ಹಣದಲ್ಲಿ ಆಡಳಿತ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿ ಹುಚ್ಚರ ಸಂತೆ ನಡೆಯುತ್ತಾ ಇದೆ" ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡುತ್ತಿದ್ದಾರೆ. ಅರಣ್ಯ ಒತ್ತುವರಿಗಾಗಿ ಅವರ ವಿರುದ್ದ 15 ಕೇಸ್ಗಳು ದಾಖಲಾಗಿವೆ. ಹಣದ ವ್ಯವಹಾರ, ಡ್ರಾಮಾ ಎಲ್ಲಾ ಹೊರಗೆ ಬರುತ್ತದೆ. ಎಲ್ಲವನ್ನೂ ಜನರು ನೋಡುತ್ತಿದ್ದು, ಇದಕ್ಕೆ ಉತ್ತರ ನೀಡಲಿದ್ದಾರೆ" ಎಂದು ಹೆಳಿದರು.
"ಕೇಂದ್ರ ಸರ್ಕಾರದ ತಾರತಮ್ಯ, ಎನ್ಆರ್ಸಿ ಹಾಗೂ ಎನ್ಪಿಆರ್ ವಿರುದ್ದ ಸದನದಲ್ಲಿ ಧ್ವನಿ ಎತ್ತುತ್ತೇವೆ. ಕಾಯ್ದೆ ಮೀರಿ ಸಾಲ ಪಡೆದು ಬಜೆಟ್ ಮಂಡನೆ ಮಾಡಲಾಗುತ್ತಿದೆ. ಈ ರೀತಿ ಸಾಲ ಪಡೆದು ಬಜೆಟ್ ಮಂಡನೆ ಮಾಡಬಾರದೆಂಬುದು ನಮ್ಮ ನಿಲುವು. ರಾಜ್ಯಕ್ಕೆ 30 ಸಾವಿರ ಕೋಟಿ ವಂಚನೆ ಮಾಡಿದ್ದರ ವಿಚಾರವಾಗಿ ನಾವು ತೀವ್ರವಾಗಿ ಪ್ರತಿಭಟನೆ ಮಾಡುತ್ತೇವೆ. ಅಲ್ಲಿಂದ ಕಡಿಮೆ ದುಡ್ಡು ಸಿಕ್ಕಿದೆ ಎಂದು ಇಲ್ಲಿನ ಜನರ ಮೇಲೆ ಹೊರೆ ಹಾಕೋದು ಸರಿಯಲ್ಲ.ಕೇಂದ್ರ ಸರ್ಕಾರದಿಂದ 30 ಸಾವಿರ ಕೋಟಿ ಕಡಿಮೆ ಬರುತ್ತಿದೆ ಅನ್ನೋದು ನಮ್ಮ ಗಮನಕ್ಕೆ ಬಂದಿದೆ" ಎಂದರು.