ಬೆಂಗಳೂರು, ಫೆ.16 (DaijiworldNews/PY): "ರೈತರು ಸ್ವಾಭಿಮಾನ ಮತ್ತು ನೆಮ್ಮದಿಯಿಂದ ಬದುಕು ನಡೆಸಬೇಕಾಗಿದೆ. ಇದಕ್ಕಾಗಿ ಬಜೆಟ್ನಲ್ಲಿ ಸಾಕಷ್ಟು ಹಣ ಮೀಸಲಿಡುವ ಮೂಲಕ ನೀರಾವರಿಗೆ ಆದ್ಯತೆ ನೀಡಲಾಗುವುದು" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅಸಂಖ್ಯ ಪ್ರಮಥರ ಗಣಮೇಳದಲ್ಲಿ ಮಾತನಾಡಿದ ಅವರು, "ಈ ಬಾರಿಯ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುವುದು. ಬೆಳೆಗಳಿಗೆ ಹೆಚ್ಚು ಬೆಂಬಲ ಬೆಲೆ ಘೋಷಿಸಲಾಗುವುದು. ರೈತರು ಸ್ವಾಭಿಮಾನ ಹಾಗೂ ನೆಮ್ಮದಿಯಿಂದ ಬದುಕು ನಡೆಸಬೇಕಾಗಿದೆ. ಇದಕ್ಕಾಗಿ ಬಜೆಟ್ನಲ್ಲಿ ಸಾಕಷ್ಟು ಹಣ ಮೀಸಲಿಡುವ ಮೂಲಕ ನೀರಾವರಿಗೆ ಆದ್ಯತೆ ನೀಡಲಾಗುವುದು. ಮಠ-ಮಾನ್ಯಗಳಿಗೂ ಬಜೆಟ್ನಲ್ಲಿ ಆದ್ಯತೆ ನೀಡಲಾಗುವುದು" ಎಂದು ತಿಳಿಸಿದರು.
"ನಾಡಿನ ಎಲ್ಲರೂ ಕಲ್ಯಾಣ ಕರ್ನಾಟಕಕ್ಕೆ ಭೇಟಿ ಮಾಡುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗುವುದು. ಈ ಪೈಕಿ 100 ಕೋಟಿಯನ್ನು ಇದೇ ವರ್ಷದಲ್ಲಿ ವಿನಿಯೋಗಿಸಲಾಗುವುದು" ಎಂದರು.
"ಚಿತ್ರದುರ್ಗದಲ್ಲಿ ನಿರ್ಮಾಣವಾಗುತ್ತಿರುವ ಬಸವ ಪುತ್ಥಳಿಗೆ ಈಗಾಗಲೇ ಸಾಕಷ್ಟು ಹಣ ನೀಡಲಾಗಿದ್ದು, ಇನ್ನಷ್ಟು ಅನುದಾನ ನೀಡಲಾಗುವುದು" ಎಂದು ತಿಳಿಸಿದರು.
"12ನೇ ಶತಮಾನದಲ್ಲಿ ಶರಣರು ಜಾತಿ, ಮತ, ಧರ್ಮದ ಚೌಕಟ್ಟಿಲ್ಲದೆ ನಡೆದುಕೊಂಡು ಬಂದಿದ್ದರು. ಅದೇ ಮಾದರಿಗೆ ಈ ಗಣಮೇಳ ಸಾಕ್ಷಿಯಾಗಿದೆ. ಬಸವಣ್ಣನವರು ನಡೆಸಿದ್ದ ಗಣಮೇಳದಲ್ಲಿ 1.96 ಲಕ್ಷ ಜನ ಸೇರಿದ್ದು ದಾಖಲೆಯಾಗಿತ್ತು" ಎಂದು ಬಿಎಸ್ವೈ ಹೇಳಿದರು.