ಚಿತ್ರದುರ್ಗ, ಫೆ.16 (DaijiworldNews/PY): "ಕಾಶ್ಮೀರ ಭಾರತಕ್ಕೆ ಸೇರಿದ್ದು, ಅದನ್ನು ಫ್ರೀ ಕಾಶ್ಮೀರ ಮಾಡಲು ಬಿಡುವುದಿಲ್ಲ. ಪಾಕಿಸ್ತಾನಕ್ಕೆ ಜೈಕಾರ ಹಾಕುವವರನ್ನು ನೋಡಿಕೊಂಡು ಸರ್ಕಾರ ಸುಮ್ಮನೆ ಕೂರಲು ಸಾಧ್ಯವಿಲ್ಲ. ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶಾಲಾ ಮಕ್ಕಳು ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಾರೆ. ಬೀದರ್ನ ಶಾಹೀನ್ ಪ್ರಾಥಮಿಕ ಶಾಲೆಯ ಶಿಕ್ಷಕಿ ಹಾಗೂ ಪೋಷಕಿ ಅಮಾಯಕರಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ನೆಪದಲ್ಲಿ ನಡೆಯುತ್ತಿರುವ ಹೋರಾಟ ದೇಶದ್ರೋಹ ಎಸಗುತ್ತಿದೆ" ಎಂದರು.
"ಭಾರತದ ಪ್ರಜೆಗಳಾಗಿ ಪಾಕಿಸ್ತಾನ ಬೆಂಬಲಿಸಿದರೆ ಕೈಕಟ್ಟಿಕೊಂಡು ಸುಮ್ಮನಿರಬೇಕೆ? ಕಾಶ್ಮೀರ ಭಾರತಕ್ಕೆ ಸೇರಿದ್ದು, ಅದನ್ನು ಫ್ರೀ ಕಾಶ್ಮೀರ ಮಾಡಲು ಬಿಡುವುದಿಲ್ಲ. ಹುಬ್ಬಳ್ಳಿ ಎಂಜಿನಿಯರಿಂಗ್ ಕಾಲೇಜು ಯುವಕರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ಖಂಡನೀಯ. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಇಂತಹ ದೇಶ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ" ಎಂದು ಹೇಳಿದರು.
"ಜೆಡಿಎಸ್-ಕಾಂಗ್ರೆಸ್ ಸರ್ಕಾರ ಹೇಗೆ ನಡೆದುಕೊಂಡಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಬಿ.ಎಸ್.ವೈ ನೇತೃತ್ವದಲ್ಲಿ ಪ್ರಾಮಾಣಿಕ ಕಾರ್ಯ ಮಾಡುತ್ತೇವೆ. ಬಿಜೆಪಿ ದ್ವೇಷ, ಸೇಡಿನ ರಾಜಕಾರಣ ಮಾಡಿದ್ದರೆ ಕಾಂಗ್ರೆಸ್ ಹಾಗೂ ಜೆಡಿಎಸ್ನ ಹಲವು ನಾಯಕರು ಮನೆಯ ಬದಲು ಎಲ್ಲೋ ಇರುತ್ತಿದ್ದರು. ಆ ಪಕ್ಷಗಳಂತೆ ಸೇಡಿನ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲ" ಎಂದು ತಿಳಿಸಿದರು.