ನವದೆಹಲಿ, ಫೆ 17 (Daijiworld News/MB) : ತಾವು ಸೋಲೇ ಇಲ್ಲದವರು ಎಂಬ ಭ್ರಮೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ದೆಹಲಿಯ ಜನತೆ ಅರಿಯಾದ ಪಾಠ ಕಲಿಸಿದ್ದಾರೆ ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ಶಿವಸೇನೆ ಪಕ್ಷದ ಮುಖವಾಣಿ "ಸಾಮ್ನ" ದ ವಾರದ ಅಂಕಣದಲ್ಲಿ, ಬಿಜೆಪಿಯ ಧರ್ಮ ಕೇಂದರಿತ ಚುನಾವಣಾ ತಂತ್ರಗಾರಿಕೆಯನ್ನು ಟೀಕೆ ಮಾಡಿದ ರಾವತ್, "ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮಗೆ ಸೋಲಿಲ್ಲ ಎಂಬ ಭಾವನೆ ಮೂಡಿಸಿದ್ದ ಬಿಜೆಪಿ, ಈಗ ದೆಹಲಿಯ ಚುನಾವಣೆಯಲ್ಲಿ ಇಸ್ಪಿಟ್ ಕಾರ್ಡ್ನ ಮನೆಯಂತೆ ಉರುಳಿ ಬಿದ್ದಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
ಮತದಾರರು ಅಪ್ರಾಮಾಣಿಕರಲ್ಲ. ರಾಜಕೀಯ ಲಾಭಕ್ಕಾಗಿ ಕೆರಳಿಸಲಾಗುತ್ತಿರುವ ಧಾರ್ಮಿಕ ಭಾವನೆಯ ಸುಳಿಗಾಳಿಗೆ ಅವರು ಸಿಲುಕುವುದಿಲ್ಲ. ಧರ್ಮದವಿಲ್ಲದ ದೇಶ ಯಾವುದೂ ಇಲ್ಲ. ಆದರೆ ಧರ್ಮ ಎಂದರೆ ದೇಶ ಭಕ್ತಿಯಲ್ಲ ಎಂದು ತಿಳಿಸಿದ್ದಾರೆ.
ಹಮನುಂತ ಭಕ್ತ ಕೇಜ್ರವಾಲ್ರಿಗೆ ದೆಹಲಿಯ ಜನತೆ ರಾಮನಂತೆ ಆಶೀರ್ವಾದ ಮಾಡಿದ್ದಾರೆ. ಈ ಚುನಾವಣೆಯಿಂದ ಹಲವು ಪಾಠಗಳನ್ನು ಕಲಿಯಬೇಕಾಗಿದೆ ಎಂದು ರಾವತ್ ಹೇಳಿದ್ದಾರೆ.
ಪ್ರಸ್ತುತ ಬಿಜೆಪಿಗೆ ಚುನಾವಣೆಯಲ್ಲಿ ಜಯಗಳಿಸಲು ಶ್ರೀರಾಮನು ನೆರವಾಗುತ್ತಿಲ್ಲ. ಸ್ವಹಿತಾಸಕ್ತಿಯೇ ಮೋದಿ ಹಾಗೂ ಕೇಜ್ರಿವಾಲ್ ನಡುವೆ ಇರುವ ಸಾಮ್ಯತೆ. ಆದರೆ ಮೋದಿಗೆ ಜಂಭ ಹಾಗೂ ದುರಹಂಕಾರ ಅಧಿಕವಾಗಿದೆ ಎಂದು ದೂರಿದ್ದಾರೆ.
ಈ ಮೊದಲು ಕೇಜ್ರಿವಾಲ್ ಅವರಿಗೆ ಇಡೀ ಈ ದೇಶದ ನಾಯಕನಾಗುವ ಆಸೆ ಮೂಡಿತ್ತು. ಆದರೆ ಲೋಕಸಭೆಯಲ್ಲಿ ಆದ ಸೋಲಿನಿಂದಾಗಿ ಅವರು ಪಾಠ ಕಲಿತು ತಮ್ಮ ಮಿತಿಯನ್ನು ತಿಳಿದುಕೊಂಡಿದ್ದಾರೆ ಎಂದಿದ್ದಾರೆ.
ಬಿಜೆಪಿಯೂ ಕೇಜ್ರಿವಾಲ್ ದೆಹಲಿ ಜನತೆಗೆ ನೀಡುತ್ತಿರುವ ಉಚಿತ ಸೇವೆಗಳನ್ನು ಟೀಕೆ ಮಾಡುತ್ತಿದೆ. ಆದರೆ ಈ ಹಿಂದಿನ ಚುನಾವಣೆಯಲ್ಲಿ ದೇಶದ ಎಲ್ಲಾ ಪ್ರಜೆಗಳ ಖಾತೆಗೆ ೧೫ ಲಕ್ಷ ಜಮೆ ಮಾಡುವ ಭರವಸೆ ನೀಡಿದ್ದು ಅದು ಇನ್ನೂ ಮಾಡಿಲ್ಲ. ಆದರೆ ಆಪ್ ಉತ್ತಮ ಶಿಕ್ಷಣ ವ್ಯವಸ್ಥೆ, ಆರೋಗ್ಯ ಸೇವೆ, ನೀರು, ವಿದ್ಯುತ್, ಅಗತ್ಯವಿದ್ದವರಿಗೆ ವಸತಿ ನಿರ್ಮಿಸಿಕೊಡುವ ಭರವಸೆಯನ್ನು ನೀಡಿ ಅದನ್ನು ಈಡೇರಿಸಿದೆ. ಕಳೆದ 2 ವರ್ಷದಲ್ಲಿ 2 ಕೋಟಿ ಜನರು ಉದ್ಯೋಗ ಕಳೆದುಕೊಂಡಿರುವುದನ್ನು ನೀವು (ಬಿಜೆಪಿಯವರು) ದೇಶಭಕ್ತಿ ಎಂದು ಹೇಳುತ್ತೀರಾ ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.