ಬೆಂಗಳೂರು, ಫೆ 17 (Daijiworld News/MB) : ಹುಬ್ಬಳ್ಳಿಯ ಕೆ.ಎಲ್.ಇ ಕಾಲೇಜು ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ದೇಶದ್ರೋಹ ಪ್ರಕರಣದಡಿಯಲ್ಲಿ ಶನಿವಾರ ಬಂಧಿಸಿದ್ದ ಪೊಲೀಸರು ಭಾನುವಾರ ಬಿಡುಗಡೆ ಮಾಡಿದ್ದಾರೆ. ಪೊಲೀಸರ ಈ ವರ್ತನೆಯನ್ನು ವಿಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಂಗಳೂರಿನಲ್ಲಿ ಮಾತನಾಡಿ, "ಈ ಸರ್ಕಾರ ತಾರತಮ್ಯ ಮಾಡುತ್ತಿದೆ. ಪಾಕಿಸ್ತಾನದ ಪರ ಘೋಷಣೆ ಕೂಗುವುದು ದೇಶ ದ್ರೋಹದ ಕೆಲಸ. ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲು ಮಾಡಬೇಕು. ಅದನ್ನು ಬಿಟ್ಟು ಬೀದರ್ ಶಾಹೀನ್ ಶಾಲೆ ಮೇಲೆ ಸುಮ್ಮನೆ ದೇಶದ್ರೋಹಿ ಪ್ರಕರಣ ದಾಖಲು ಮಾಡಿದೆ. ಈ ಸರ್ಕಾರ ಒಬ್ಬರ ಮೇಲೆ ಒಂದೊಂದು ರೀತಿಯಾಗಿ ಪ್ರಕರಣ ದಾಖಲಿಸುವುದರ ಮೂಲಕ ತಾರತಮ್ಯ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿ, "ಮೊದಲು ರಾಜ್ಯ ಪೊಲೀಶರು ದಕ್ಷರಾಗಿದ್ದರು. ಆದರೆ ಈಗ ಪೊಲೀಸ್ ಇಲಾಖೆಯಲ್ಲೂ ರಾಜಕೀಯ ಹೊಕ್ಕಿದೆ. ದೇಶದ್ರೋಹ ಆರೋಪ ಇರುವ ಕಾಶ್ಮೀರಿ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದ್ದು ಯಾಕೆ? ಪೊಲೀಸರ ಈ ನಡೆ ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಬಿಜೆಪಿ ಪಕ್ಷದ ಸೂಚನೆಯಂತೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಯಾರ ಮೇಲೆ ಪ್ರಕರಣ ದಾಖಲು ಮಾಡುವ ಅಗತ್ಯವಿಲ್ಲವೋ ಅವರ ಮೇಲೆ ಪ್ರಕರಣ ದಾಖಲು ಮಾಡುತ್ತಾರೆ. ಯಾರ ಮೇಲೆ ಪ್ರಕರಣ ದಾಖಲು ಮಾಡುವ ಅಗತ್ಯವಿಲ್ಲವೋ ಅವರ ಮೇಲೆ ಪ್ರಕರಣ ದಾಖಲು ಮಾಡುತ್ತಾರೆ. ಪಾಕಿಸ್ತಾನದ ಪರ ಘೋಷಣೆ ಕೂಗುವವರನ್ನು ಬಿಟ್ಟು ಕಳಿಸಿದ್ದಾರೆ ಎಂದರೆ ಏನು ಅರ್ಥ ಎಂದು ಪ್ರಶ್ನೆ ಮಾಡಿದರು.
ಹಾಗೆಯೇ ಅನಂತ್ ಕುಮಾರ್ ಹೆಗಡೆ, ಸೋಮಶೇಖರ್ ರೆಡ್ಡಿ, ಸಿಟಿ ರವಿ ಮೇಲೆಯೂ ಯಾವುದೇ ಕ್ರಮಕೈಗೊಂಡಿಲ್ಲ. ಮಹಾತ್ಮಾ ಗಾಂಧಿ ವಿರುದ್ಧ ಮಾತನಾಡಿದರೂ ಯಾವುದೇ ಪ್ರಕರಣ ದಾಖಲಿಸಿಲ್ಲ. ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ತನಿಖೆ ನಡೆಸದೆಯೇ ಬಿಟ್ಟಿದ್ದಾರೆ. ಸಹಜವಾಗಿ ಪೊಲೀಸ್ ಇಲಾಖೆಯಲ್ಲಿ ಸಣ್ಣಪುಟ್ಟ ಒತ್ತಡಗಳು ಇರುತ್ತವೆ. ಆದರೆ ಇದು ಬಿಜೆಪಿ ಸರ್ಕಾರದಲ್ಲಿ ಮಾತ್ರ ವಿಪರೀತವಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಕಳೆದ ಎರಡು ತಿಂಗಳಿಂದ ಬೇರೆ ಬೇರೆ ಘಟನೆಗಳು ನಡೆಯುತ್ತಿವೆ. ಈ ಸರ್ಕಾರಕ್ಕೆ ಜನರು ಶಾಂತಿಯಾಗಿ, ಸೌಹಾರ್ದವಾಗಿ ಬದುಕಬೇಕು ಎಂಬ ಇಚ್ಛೆ ಇಲ್ಲದಂತೆ ಕಾಣುತ್ತದೆ. ಹಾಗಾಗಿ ಈ ರೀತಿ ನಡೆಯುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದ ಕೈಗೊಂಬೆಯಂತೆ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಎಲ್ಲರಿಗೂ ಕಾನೂನು ಒಂದೇ ರೀತಿಯಾಗಿ ಇರಬೇಕು. ವರ್ಗಾವಣೆಯಾಗುತ್ತಾರೆ ಎಂದು ಪೊಲೀಸರು ಒಬ್ಬೊಬ್ಬರಿಗೆ ಒಂದೊಂದು ಕಾನೂನು ಮಾಡುವುದು ಸರಿಯಲ್ಲ. ಜನರಿಗೆ ಪೊಲೀಸ್ ಇಲಾಖೆ ಮೇಲಿದ್ದ ನಂಬಿಕೆ ಕಡಿಮೆಯಾಗುತ್ತಿದೆ. ಡಿಜಿ ಐಜಿ ಅವರ ಗಮನಕ್ಕೆ ತಾರದೇ ಎಸ್ ಪಿ ನಿರ್ಧಾರ ಮಾಡುವುದಕ್ಕೆ ಆಗುವುದಿಲ್ಲ. ಈ ಬಗ್ಗೆ ಡಿಜಿ ಐಜಿ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಪೊಲೀಸರು ಬಿಜೆಪಿಯ ಕೈಗೊಂಬೆಯಂತೆ ಕಾರ್ಯನಿರ್ವಹಿಸುವುದನ್ನು ಬಿಡಬೇಕು. ಕಾನೂನು ಪ್ರಕಾರವಾಗಿ ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದರು.