ವಾರಾಣಸಿ, ಫೆ 17 (Daijiworld News/MB) : ಪ್ರಧಾನಿ ನರೇಂದ್ರ ಮೋದಿಯವರು ಉತ್ತರಪ್ರದೇಶದ ವಾರಾಣಸಿ ಮತ್ತು ಮಧ್ಯಪ್ರದೇಶ ಸೇರಿದಂತೆ ಎರಡು ರಾಜ್ಯಗಳ ಮೂರು ಜ್ಯೋತಿರ್ಲಿಂಗ ತಾಣವನ್ನು ಸಂಪರ್ಕಿಸುವ ಕಾಶಿ ಮಹಾಕಾಲ್ ಎಕ್ಸ್ ಪ್ರೆಸ್ ರೈಲಿಗೆ ಭಾನುವಾರ ಚಾಲನೆ ನೀಡಿದ್ದು ಇದರಲ್ಲಿ ಬಿ5 ಕೋಚ್ ನ 64ನೇ ನಂಬರ್ ನ ಸೀಟನ್ನು ಶಿವನಿಗೆ ಮೀಸಲಿಡಲಾಗಿದೆ.
ಕಾಶಿ ಮಹಾಕಾಲ್ ಎಕ್ಸ್ ಪ್ರೆಸ್ ರೈಲು ಇಂದೋರ್ ಸಮೀಪದ ಓಂಕಾರೇಶ್ವರ್, ಉಜ್ಜೈನ್ ನ ಮಹಾಕಾಲೇಶ್ವರ್ ಮತ್ತು ವಾರಾಣಸಿಯ ಕಾಶಿ ವಿಶ್ವನಾಥನ ಜ್ಯೋತಿರ್ಲಿಂಗ ತಾಣವನ್ನು ಸಂಪರ್ಕಿಸಲಿದ್ದು ಈ ರೈಲಿನ ಒಳಗಡೆ ಶಿವನ ಫೋಟೋ ಇರಿಸಿ ಸಣ್ಣ ದೇವಾಲಯದ ರೀತಿ ಅಲಂಕಾರ ಮಾಡಲಾಗಿದೆ.
ಮಹಾಕಾಲ್ ಎಕ್ಸ್ ಪ್ರೆಸ್ ರೈಲು ಸಂಚಾರ ಫೆ.20ರಿಂದ ಆರಂಭವಾಗಲಿದ್ದು ಕೋಚ್ ಬಿ5ರಲ್ಲಿನ ಸೀಟ್ ನಂಬರ್ 64ರಲ್ಲಿ ಈಶ್ವರನ ಫೋಟೋ ಇಡಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಜನರಲ್ಲಿ ಸೀಟಿನ ಕುರಿತು ಅರಿವು ಮೂಡಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.