ನವದೆಹಲಿ, ಫೆ 17 (Daijiworld News/MB) : ಪ್ರಧಾನಿ ನರೇಂದ್ರ ಮೋದಿಯವರು ಉತ್ತರಪ್ರದೇಶದ ವಾರಾಣಸಿ ಮತ್ತು ಮಧ್ಯಪ್ರದೇಶ ಸೇರಿದಂತೆ ಎರಡು ರಾಜ್ಯಗಳ ಮೂರು ಜ್ಯೋತಿರ್ಲಿಂಗ ತಾಣವನ್ನು ಸಂಪರ್ಕಿಸುವ ಕಾಶಿ ಮಹಾಕಾಲ್ ಎಕ್ಸ್ ಪ್ರೆಸ್ ರೈಲಿಗೆ ಭಾನುವಾರ ಚಾಲನೆ ನೀಡಿದ್ದು ಇದರಲ್ಲಿ ಬಿ5 ಕೋಚ್ ನ 64ನೇ ನಂಬರ್ ನ ಸೀಟನ್ನು ಈಶ್ವರನಿಗೆ ಮೀಸಲಿಡಲಾಗಿದೆ. ಈ ಕುರಿತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವಿಚಾರದ ಕುರಿತಾಗಿ ವರದಿಯ ಟ್ವೀಟ್ ಒಂದನ್ನು ಉಲ್ಲೇಖ ಮಾಡಿ ಪ್ರಧಾನಿ ಕಚೇರಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಅವರು ಸಂವಿಧಾನದ ಮುನ್ನುಡಿಯ ಪ್ರತಿಯನ್ನು ಲಗತ್ತಿಸಿದ್ದಾರೆ.
ಮಹಾಕಾಲ್ ಎಕ್ಸ್ ಪ್ರೆಸ್ ರೈಲು ಸಂಚಾರ ಫೆ.20ರಿಂದ ಆರಂಭವಾಗಲಿದ್ದು ಕೋಚ್ ಬಿ5ರಲ್ಲಿನ ಸೀಟ್ ನಂಬರ್ 64ರಲ್ಲಿ ಈಶ್ವರನ ಫೋಟೋ ಇಡಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಜನರಲ್ಲಿ ಸೀಟಿನ ಕುರಿತು ಅರಿವು ಮೂಡಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದರು.