ನವದೆಹಲಿ, ಫೆ.17 (DaijiworldNews/PY): ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಮಾಂಡರ್ ಹುದ್ದೆ ನೀಡಬೇಕೆಂದು ದೆಹಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
ಮಹಿಳಾ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳುವ ವೇಳೆಯಲ್ಲಿಯೇ ಪುರುಷರ ನೇಮಕಾತಿಯ ನಿಬಂಧನೆಗಳ ಪ್ರಕಾರವೇ ಮಾಡಬೇಕು. ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮಿಷನ್ ಹುದ್ದೆ ನೀಡಬೇಕು. ಈ ವಿಚಾರವಾಗಿ ಕೇಂದ್ರ ಸರ್ಕಾರ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಸೂಚಿಸಿದೆ.
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮಿಷನ್ ಅನ್ವಯವಾಗಲಿದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಸೇನೆಯಲ್ಲಿ ಮಹಿಳೆಯರಿಗೆ ಕಮಾಂಡರ್ ಹುದ್ದೆ ನೀಡಬೇಕೆಂಬ ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ದೈಹಿಕ ರಚನೆ ಆಧಾರದ ಮೇಲೆ ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಮಾಂಡರ್ ಹುದ್ದೆ ವಿರೋಧಿಸುವ ಕೇಂದ್ರದ ನಿಲುವನ್ನು ತಿರಸ್ಕರಿಸಿದೆ. ಲಿಂಗಾಧಾರಿತವಾಗಿ ಆಲೋಚಿಸುವ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.