ಜೈಪುರ, ಫೆ 17 (Daijiworld News/MB) : "ನೋಟು ರದ್ದತಿ ಮಾಡಿದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಯಾವುದೇ ಸಂದರ್ಭದಲ್ಲಿ ಮೀಸಲಾತಿ ಸೌಲಭ್ಯವನ್ನೂ ರದ್ದು ಮಾಡುವ ಸಾಧ್ಯತೆಯಿದೆ" ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಬುಡಕಟ್ಟು, ಇತರ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ ವಿಭಾಗ ಸಂಯುಕ್ತವಾಗಿ ಈ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದ ಅವರು, " ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಬಿಜೆಪಿಯು ಆರೆಸ್ಸೆಸ್ ಕಾರ್ಯಸೂಚಿಯನ್ನು ಹೇರುತ್ತಿದೆ" ಎಂದು ಆಪಾದನೆ ಮಾಡಿದರು.
"ಆರ್ಎಸ್ಎಸ್ ಕಾರ್ಯಸೂಚಿಯನ್ನು ಬಿಜೆಪಿ ದೇಶದಲ್ಲಿ ಅನುಷ್ಠಾನ ಮಾಡುತ್ತಿದ್ದು ಇದರಿಂದಾಗಿ ದೇಶದಮ ಸ್ಥಿತಿಯು ಹಾಳಗುತ್ತಿದೆ. ಯಾವಾಗ ಈ ಕಾರ್ಯಸೂಚಿ ಮುಗಿಯುತ್ತದೆಯೋ ಅಂದು, ನೋಟು ರದ್ಧತಿ ನಿಧಾರ ಮಾಡಿದಂತೆ ಬಿಜೆಪಿ ಮೀಸಲಾತಿ ಸ್ಥಗಿತ ಮಾಡುವ ತೀರ್ಮಾನವನ್ನು ದಿಢೀರನ್ನೇ ಪ್ರಕಟ ಮಾಡುತ್ತದೆ" ಎಂದು ಅವರು ಹೇಳಿದರು.
"ಮೀಸಲಾತಿ ಆರಂಭ ಮಾಡಿ 70 ವರ್ಷಗಳು ಆಗಿದೆ. ಹಾಗಾಗಿ ಇನ್ನು ಮುಂದೆ ಅದರ ಅಗತ್ಯವಿಲ್ಲ ಎಂಬುದು ಆರ್ಎಸ್ಎಸ್ನ ಪ್ರತಿಪಾದನೆ. ಮೋಹನ್ ಭಾಗವತ್ ಅದನ್ನೇ ಹೇಳಿದ್ದರು. ಆದರೆ ಚುನಾವಣೆ ಬಳಿಕ ತಮ್ಮ ಹೇಳಿಕೆಯ ಅರ್ಥ ಅದಾಗಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಕೇಂದ್ರ ಸರ್ಕಾರ ಮೀಸಲಾತಿಯ ವಿಚಾರದಲ್ಲಿ ಅಪಾಯಕಾರಿಯಾಗಿ ಆಟವಾಡುತ್ತಿದೆ" ಎಂದು ದೂರಿದರು.