ಬೆಂಗಳೂರು, ಫೆ 17 (Daijiworld News/MB) : "ಜಿ.ಟಿ. ದೇವೇಗೌಡ ಇನ್ನೂ ಜೆಡಿಎಸ್ನಲ್ಲಿಯೇ ಇದ್ದಾರಾ?" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ವಿಧಾನ ಪರಿಷತ್ ಒಂದು ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಜಿ.ಟಿ ದೇವೇಗೌಡ ಬಿಜೆಪಿ ಅಭ್ಯರ್ಥಿಯಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪರವಾಗಿ ಮತದಾನ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಜಿ.ಟಿ.ಡಿ. ಇನ್ನೂ ಜೆಡಿಎಸ್ನಲ್ಲಿಯೇ ಇದ್ದಾರೆಯೇ?" ಎಂದು ಪ್ರಶ್ನಿಸಿದರು.
"ಹಲವಾರು ಹೇಳಿಕೆಯನ್ನು ಜಿ.ಟಿ.ದೇವೇಗೌಡರು ಕೊಟ್ಟಿದ್ದಾರೆ. ಅವರು ಇನ್ನು ಮುಂದೆ ಜೆಡಿಎಸ್ನಲ್ಲಿ ಇರುತ್ತಾರೆಯೋ ಕಾಂಗ್ರೆಸ್ನಲ್ಲಿ ಇರುತ್ತಾರೆಯೋ ಎಂಬುದನ್ನು ಕಾದು ನೋಡಬೇಕು. ಮತದಾನದಲ್ಲಿ ಭಾಗಿವಹಿಸುವುದು ಬೇಡವೆಂದು ಶಾಸಕಾಂಗ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದೇವೆ. ಶಾಸಕಾಂಗ ಪಕ್ಷಕ್ಕೆ ಅಗೌರವ ಸಲ್ಲಿಸಿರುವುದು ಜಿ.ಟಿ.ದೇವೇಗೌಡರಿಗೆ ಬಿಟ್ಟ ವಿಚಾರ" ಎಂದು ಹೇಳಿದರು.
"ಕಾಂಗ್ರೆಸ್ನವರು ಈ ಉಪಚುನಾವಣೆಯಲ್ಲಿ ಮತದಾನದಲ್ಲಿ ಭಾಗಿಯಾಗುವುದಿಲ್ಲ ಎಂದು ಸಂದೇಶ ನೀಡಿದ್ದರು. ಇದು ಉಪಯೋಗಕ್ಕೆ ಬರುವುದಿಲ್ಲ ಎಂದು ನಾವೂ ಚುನಾವಣೆಯಲ್ಲಿ ಭಾಗಿಯಾಗಿಲ್ಲ" ಎಂದು ಕುಮಾರ ಸ್ವಾಮಿ ಸ್ಪಷ್ಟನೆ ನೀಡಿದರು.