ನವದೆಹಲಿ, ಫೆ.17 (DaijiworldNews/PY): ರಾಷ್ಟ್ರಪತಿಯವರ ಭಾಷಣ ನಂತರ ವಂದನಾರ್ಪಣೆಗೆ ಉತ್ತರಿಸುವ ಸಂದರ್ಭ ಪ್ರಧಾನಿ ಮೋದಿ ಅವರು ರಾಜ್ಯಸಭೆಯನ್ನು ತಪ್ಪುದಾರಿಗೆಳೆದಿದ್ದಾರೆ ಎಂದು ಸಿಪಿಐ ನಾಯಕ ಹಾಗೂ ರಾಜ್ಯಸಭಾ ಸಂಸದ ಬಿನೊಯ್ ವಿಶ್ವಂ ಅವರು ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ನಿಲುವಳಿ ನೋಟಿಸ್ ಸಲ್ಲಿಸಿದ್ದಾರೆ.
ಪಿಣರಾಯಿ ತಮ್ಮ ರಾಜ್ಯದ ವಿಧಾನಸಭೆಯಲ್ಲಿ ಮಾಡಿರುವ ಭಾಷಣವನ್ನು ಉಲ್ಲೇಖಿಸಿಕೊಂಡು ಕೇರಳದಲ್ಲಿ ಪ್ರತಿಭಟನೆಗಳಲ್ಲಿ ತೀವ್ರಗಾಮಿ ಗುಂಪುಗಳು ಶಾಮೀಲಾಗಿವೆ ಎಂದು ಪ್ರಧಾನಿ ಮೋದಿ ತಮ್ಮ ಉತ್ತರದಲ್ಲಿ ಹೇಳಿರುವ ಬಗ್ಗೆ ವಿಶ್ವಂ ಅವರು ತಮ್ಮ ಹಕ್ಕುಚ್ಯುತಿ ನಿಲುವಳಿ ನೋಟಿಸ್ನಲ್ಲಿ ನಮೂದಿಸಿದ್ದಾರೆ. ಪ್ರಧಾನಿ ಮೋದಿ ಅವರು ಪಿಣರಾಯಿ ಅವರ ಹೇಳಿಕೆಯನ್ನು ತಮ್ಮದೇ ರಾಜಕೀಯ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ತಿರುಚಲು ಯತ್ನಿಸಿದ್ದಾರೆಂದು ರಾಜ್ಯಸಭಾ ಸೆಕ್ರೇಟೆರಿಯೇಟ್ಗೆ ನೀಡಿರುವ ತಮ್ಮ ನೋಟಿಸ್ನಲ್ಲಿ ತಿಳಿಸಿದ್ದಾರೆ.
ಎನ್ಆರ್ಸಿ, ಸಿಎಎ, ಎನ್ಪಿಆರ್ ವಿರುದ್ದ ಜನರ ಪ್ರತಿಭಟನೆಗಳು ಅಕ್ರಮ ಎಂದು ಹೇಳುವ ಪ್ರಯತ್ನವನ್ನು ಪ್ರಧಾನಿ ಮೋದಿ ಮಾಡಿದ್ದಾರೆ ಎಂದು ವಿಶ್ವಂ ತಿಳಿಸಿದ್ದಾರೆ.
ಪಿಣರಾಯಿ ಅವರ ಭಾಷಣದಲ್ಲಿ ತೀವ್ರಗಾಮಿ ಸಂಘಟನೆ ಎಸ್ಡಿಪಿಐಯನ್ನು ಉಲ್ಲೇಖಿಸಿದ್ದರು ಮತ್ತು ಜನರ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ಸೇರಿಕೊಂಡು ಅದನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುತ್ತಿರುವ ಬಗ್ಗೆ ವಿಶ್ವಂ ಅವರು ತಾವು ನೀಡಿದ್ದ ನೋಟಿಸ್ನಲ್ಲಿ ಹೇಳಿದ್ದರು. ಇದಲ್ಲದೇ, ಪ್ರಧಾನಿ ಮೋದಿ ಅವರು ಹೇಳಿದಂತೆ ಯಾವುದೇ ಸನ್ನಿವೇಶದಲ್ಲಿಯೂ ಪಿಣರಾಯಿ ಅವರು ಸಿಎಎ ವಿರುದ್ದ ಜನರ ಪ್ರತಿಭಟನೆಯನ್ನು ಪ್ರಶ್ನಿಸಿಲ್ಲ ಅಥವಾ ಈ ಪ್ರತಿಭಟನೆಗಳನ್ನು ತೀವ್ರಗಾಮಿ ಸಂಘಟನೆಗಳು ನಡೆಸುತ್ತಿವೆ ಎಂದು ತಿಳಿಸಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ಎನ್ಆರ್ಸಿ ವಿಚಾರವಾಗಿ ಸಂಸತ್ತಿನಲ್ಲಿ ಹಾಗೂ ಸಂಸತ್ತಿನ ಹೊರಗಡೆ ವಿರೋದಾಭಾಸದ ಹೇಳಿಕೆ ನೀಡುತ್ತಿದ್ದಾರೆ ಎಂದು ವಿಶ್ವಂ ಅವರು ಗೃಹಸಚಿವ ಅಮಿತ್ ಶಾ ಅವರು ವಿರುದ್ದ ಹಕ್ಕುಚ್ಯುತಿ ನಿಲುವಳಿ ಮಂಡಿಸಿದ್ದರು.