ನವದೆಹಲಿ, ಫೆ.17 (DaijiworldNews/PY): "ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ಲೈಬ್ರೆರಿಯಲ್ಲಿದ್ದವರು ಕಲ್ಲು ತೂರಾಟಗಾರರು, ಈ ವಿಚಾರವಾಗಿ ತನಿಖಾ ಏಜೆನ್ಸಿಗಳು ಕ್ರಮಕೈಗೊಳ್ಳಬೇಕು" ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವಿ ಅಮಿತ್ ಮಾಳವೀಯಾ ಅವರು, "ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ಲೈಬ್ರರಿಯಲ್ಲಿದ್ದ ವಿದ್ಯಾರ್ಥಿಗಳು ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡಿದ್ದರು, ಮಾಸ್ಕ್ ಧರಿಸಿದ್ದರು, ಮುಚ್ಚಿಟ್ಟಿದ್ದ ಪುಸ್ತಕಗಳನ್ನು ಓದುತ್ತಿದ್ದರು" ಎಂದು ತಿಳಿಸಿದ್ದಾರೆ. ಈ ವಿಚಾರವಾಗಿ ಮಾಧ್ಯವೊಂದರ ವಿಡಿಯೊವನ್ನು ಕೂಡಾ ಟ್ಯಾಗ್ ಮಾಡಿದ್ದಾರೆ.
"ಈ ವಿದ್ಯಾರ್ಥಿಗಳೆಲ್ಲರೂ ಲೈಬ್ರೆರಿಯಲ್ಲಿ ಆರಾಮವಾಗಿ ಅಧ್ಯಯನದಲ್ಲಿ ತಲ್ಲೀನರಾಗಿರುವ ಬದಲು, ಆತಂಕದಿಂದ ಪ್ರವೇಶದ್ವಾರದತ್ತ ನೋಡುತ್ತಿದ್ದರು" ಎಂದರು.
"ಜಾಮಿಯಾ ಗಲಭೆಕೋರರು ತಮ್ಮ ಗುರುತನ್ನು ತಾವೇ ಬಯಲಾಗಿಸಿಕೊಂಡಿದ್ದು ಒಳ್ಳೆಯದೇ ಆಯಿತು. ತನಿಖಾ ಏಜೆನ್ಸಿಗಳು ಈ ವಿಡಿಯೊವನ್ನು ಸಾಕ್ಷ್ಯವಾಗಿ ಪರಿಗಣಿಸಬೇಕು. ಕಲ್ಲು ತೂರಾಟದ ಮುಗಿದ ನಂತರ ಲೈಬ್ರರಿಯಲ್ಲಿ ಅಡಗಿಕೊಳ್ಳಲು ಯತ್ನಿಸಿದ ಜಾಮಿಯಾ ಗಲಭೆಗೋರರ ಅಂಗರಚನಾ ಶಾಸ್ತ್ರವೇ ಇದು" ಎಂದು ಮಾಳವೀಯಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಪ್ರತಿಭಟನಾ ಮೆರವಣಿಗೆ ನಂತರ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಹಿಂಸಾಚಾರ ನಡೆದ ದಿನದಂದು ರೀಡಿಂಗ್ ಹಾಲ್ನಲ್ಲಿ ಹಲವಾರು ಪೊಲೀಸರು ವಿದ್ಯಾರ್ಥಿಗಳನ್ನು ಥಳಿಸುತ್ತಿರುವ ವಿಡಿಯೊ ಶನಿವಾರ ಹೊರಬಿದ್ದಿದೆ.
ಜಾಮಿಯಾ ಸಮನ್ವಯ ಸಮಿತಿಯು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ 49 ಸೆಕೆಂಡ್ಗಳಿರುವ ವಿಡಿಯೊವನ್ನು ಬಿಡುಗಡೆ ಮಾಡಿದ್ದು ವಿಶ್ವವಿದ್ಯಾಲಯದ ಹಳೆಯ ರೀಡಿಂಗ್ ರೂಂನಲ್ಲಿ ವಿದ್ಯಾರ್ಥಿಗಳು ಕುಳಿತ್ತಿದ್ದ ಸಂದರ್ಭದಲ್ಲಿ ಪೊಲೀಸರು ಒಳ ಪ್ರವೇಶಿಸುತ್ತಿದ್ದಂತೆ ಮೇಜಿನ ಬಳಿ ಕುಳಿತ ವ್ಯಕ್ತಿಯೊಬ್ಬರು ಮೇಜಿನ ಕೆಳಗೆ ಅಡಗಿಕೊಳ್ಳುತ್ತಾರೆ. ಹಲವಾರು ಪೊಲೀಸರು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಕೊಠಡಿಗೆ ಪ್ರವೇಶಿಸಿದ್ದು ಒಮ್ಮೆಲ್ಲೇ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡುತ್ತಾರೆ. ಈ ವೇಳೆ ಹಲವು ವಿದ್ಯಾರ್ಥಿಗಳು ಗಾಬರಿಯಿಂದ ಓಡಿಹೋಗುತ್ತಿರುವ ದೃಶ್ಯಗಳು ವಿಡಿಯೊದಲ್ಲಿದೆ.