ಹುಬ್ಬಳ್ಳಿ, ಫೆ 17 (Daijiworld News/MB) : ಪಾಕಿಸ್ತಾನ ಝಿಂದಾಬಾದ್ ಎಂದು ಕೂಗಿದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದ ಇಲ್ಲಿನ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಪಾಕ್ ಪರ ಘೋಷಣೆ ಕೂಗಿದ ಆರೋಪಿಗಳಾದ ಕಾಶ್ಮಿರದ ಬಾರಮುಲ್ಲಾದ ಅಮೀರ್ ವಾನಿ, ತಾಲೀಬ್ ಮಜೀದ್ ಮತ್ತು ಬಾಸಿತ್ ಸೋಫಿ ವಿರುದ್ಧ ಜಾಮೀನು ರಹಿತ ಐಪಿಸಿ 153ಎ (ಬಿ), 153ಬಿ (ಸಿ) ಮತ್ತು 505 (2) ಪ್ರಕರಣ ದಾಖಲಿಸಿ, ಕೋಮು ಸೌಹಾರ್ದ ಕದಡುವ ಹಾಗೂ ದೇಶದ್ರೋಹದ ಆರೋಪದಡಿ ಬಂಧಿಸಲಾಗಿತ್ತು. ಆದರೆ ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ಸಿ.ಆರ್.ಪಿ.ಸಿ 169 ಕಾಯ್ದೆ ಅಡಿಯಲ್ಲಿ ಆರೋಪಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿತ್ತು.
ಪಾಕ್ ಪರ ಘೋಷಣೆ ಕೂಗಿದವರನ್ನು ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಬಜರಂಗದಳ, ವಿಶ್ವಹಿಂದೂ ಪರಿಷತ್ ಮತ್ತು ಬಿಜೆಪಿ ಮುಖಂಡರು ಭಾನುವಾರ ಸಂಜೆ ಪ್ರತಿಭಟನೆ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಕೂಡಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಎಚ್ಚೆತ್ತ ಪೊಲೀಸ್ ಇಲಾಖೆ ಈ ಮೂವರನ್ನು ಮತ್ತೆ ಬಂಧನ ಮಾಡಿ ಕೋರ್ಟ್ಗೆ ಹಾಜರು ಮಾಡಿತ್ತು.
ನ್ಯಾಯಾಧೀಶರು ನ್ಯಾಯಾಂ ಬಂಧನಕ್ಕೆ ಆದೇಶ ನೀಡಿದ್ದು ಆ ಬಳಿಕ ಅವರನ್ನು ಅಲ್ಲಿಂದ ಕರೆದೊಯ್ಯುವಾಗ ಬಜರಂಗದಳ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಬಜರಂಗದಳ ಕಾರ್ಯಕರ್ತರನ್ನು ತಡೆಯಲು ಮುಂದಾಗಿದ್ದು ವಾಗ್ವಾದ ನಡೆದು ನೂಕುನುಗ್ಗಲು ಆಗಿದೆ.
ಬಜರಂಗದಳದ ಕಾರ್ಯಕರ್ತರು ಪೊಲೀಸ್ ವ್ಯಾನ್ ತಡೆದು ಪ್ರತಿಭಟನೆ ಮಾಡಿದರು. ನಂತರ ಆರೋಪಿಗಳನ್ನು ಭದ್ರತೆಯೊಂದಿಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಯಿತು.