ಕಲಬುರಗಿ, ಫೆ.17 (DaijiworldNews/PY): "ಹುಬ್ಬಳ್ಳಿಯ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳನ್ನು ಯಾರ ಒತ್ತಡದಿಂದ ಬಿಡುಗಡೆ ಮಾಡಿದ್ದು ಎನ್ನುವ ವಿಚಾರ ಬಹಿರಂಗವಾಗಬೇಕು" ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆಂದು ದೇಶದ್ರೋಹ ಪ್ರಕರಣ ದಾಖಲಿಸಿ, ಬಂಧಿಸಿರುವುದಾಗಿ ಎಂದು ಹುಬ್ಬಳ್ಳಿ ಪೊಲೀಸ್ ಆಯುಕ್ತ ದೀಪಕ್ ತಿಳಿಸಿದ್ದರು. ಆದರೆ ಈಗ ಏಕಾಏಕಿ ಅವರನ್ನು ಯಾಕೆ ಬಿಡುಗಡೆ ಮಾಡಿದ್ದು" ಎಂದು ಕೇಳಿದ್ದಾರೆ.
"ಬಿಡುಗಡೆಗೊಳಿಸಲು ಯಾರಿಂದ ಒತ್ತಡ ಬಂದಿದೆ ಎನ್ನುವುದು ತಿಳಿಯಬೇಕು. ಯಾವ ಕಾರಣದಿಂದ ದೇಶದ್ರೋಹಿಗಳನ್ನು ಬಿಡುಗಡೆ ಮಾಡಿದರು. ಇದರ ಹಿಂದೆ ಪೊಲೀಸರು ಅಥವಾ ರಾಜಕೀಯ ವ್ಯಕ್ತಿಗಳ ಕೈವಾಡ ಇದೆಯಾ ಎನ್ನುವುದನ್ನು ಬಹಿರಂಗಗೊಳಿಸಬೇಕು. ಪೊಲೀಸ್ ಆಯುಕ್ತ ದಿಲೀಪ್ ಅವರನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ, ಆಯುಕ್ತರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ" ಎಂದು ತಿಳಿಸಿದರು.
"ದೇಶ ದ್ರೋಹಿಗಳನ್ನು ಬಚಾವ್ ಮಾಡಲು ಕೆಎಲ್ಇ ಸೊಸೈಟಿ ಪ್ರಯತ್ನ ಮಾಡಿದರೆ ಅದು ತಪ್ಪು. ದೇಶದ್ರೋಹಿಗಳಿಗೆ ಬೆಂಬಲಿಸುವುದು ಹೆತ್ತ ತಾಯಿಗೆ ದ್ರೋಹ ಬಗೆದಂತೆ. ದೇಶದ್ರೋಹಿಗಳನ್ನು ಎನ್ ಕೌಂಟರ್ ಮಾಡಬೇಕು. ಮೂವರು ವಿದ್ಯಾರ್ಥಿಗಳ ಬಿಡುಗಡೆ ವಿಚಾರವಾಗಿ ಕೆಎಲ್ಇ ಆಡಳಿತ ಮಂಡಳಿ ಒತ್ತಡ ತಂದಿರುವ ಅನುಮಾನಗಳೂ ಇವೆ. ಅವರು ಯಾವತ್ತು ಯಾವ ಕಾಲೇಜಿನಲ್ಲಿ ಓದದಂತೆ ಬ್ಲಾಕ್ ಮಾಡಬೇಕು" ಎಂದರು.
"ಬೀದರ್ ಶಾಹಿನ್ ಶಾಲಾ ವಿದ್ಯಾರ್ಥಿಗಳ ಮೇಲೆ ದೇಶದ್ರೋಹಿ ಪ್ರಕರಣ ದಾಖಲಿಸಿದ್ದು ಸರಿಯಲ್ಲ. ಶಾಲೆಯಲ್ಲಿ ನಡೆದ ಘಟನೆ ವಿಚಾರವನ್ನು ಮೊದಲು ಶಿಕ್ಷಣ ಇಲಾಖೆಯ ಡಿಡಿಪಿಐ ಆಡಳಿತ ಮಂಡಳಿಗೆ ನೋಟಿಸ್ ನೀಡಬೇಕಿತ್ತು. ನೋಟಿಸ್ ನೀಡಿದ ಬಳಿಕ ಶಾಲೆಯಿಂದ ಉತ್ತರ ಪಡೆಯಬೇಕಿತ್ತು. ಆದರೆ, ನೇರವಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರ ಮೇಲೆ ದೇಶದ್ರೋಹಿ ಕೇಸ್ ಹಾಕಿರುವ ಪೊಲೀಸರು ಕ್ರಮ ತಪ್ಪು" ಎಂದು ಹೇಳಿದರು.