ಬೆಂಗಳೂರು, ಫೆ 17 (Daijiworld News/MB) : ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಿ.ಟಿ.ರವಿ ಅವರು ಮನವಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಘೋಷಿಸಬೇಕೆಂದು ಅಲ್ಲಿನ ಜನ, ಜನಪ್ರತಿನಿಧಿಗಳ ಮನವಿ. ಬೇಡಿಕೆಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ನಾನು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಅವರಲ್ಲಿ ತುಳುನಾಡಿನ ಜನರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ. ತುಳುವನ್ನು 8ನೇ ಪರಿಚ್ಛೇದದಲ್ಲಿ ಸೇರಿಸಲು ಅಗತ್ಯ ತೀರ್ಮಾನ ತೆಗೆದುಕೊಳ್ಳಲು ಇದು ಸಕಾಲ" ಎಂದು ಹೇಳಿದ್ದಾರೆ.
ಹಾಗೆಯೇ ಈ ಟ್ವೀಟ್ನಲ್ಲಿ ಮನವಿಯ ಪ್ರತಿಯನ್ನು ಕೂಡಾ ಲಗತ್ತಿಸಿದ್ದಾರೆ.
ಈ ಮನವಿ ಪತ್ರದಲ್ಲಿ ಕನ್ನಡದ ಸಹೋದರ ಭಾಷೆಯಲ್ಲಿ ಒಂದಾದ ತುಳು ಭಾಷೆಯನ್ನು ಉಳಿಸಿ ಬೆಳೆಸಲು ತುಳುನಾಡಿಗರು ಅಭಿಮಾನದಿಂದ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಅಗತ್ಯವಿರುವ ನೆರವು ನೀಡುವುದು ಹಿರಿಯಣ್ಣನ ಆದ್ಯ ಕರ್ತವ್ಯ ಎಂದು ಬರೆಯಲಾಗಿದೆ.
ಹಾಗೆಯೇ ಕೊನೆಯಲ್ಲಿ ಭಾರತ್ ಮಾತಾ ಕಿಜೈ, ಜೈ ಕನ್ನಡಾಂಬೆ, ತುಳು ನಾಡಿಗರ ಹೋರಾಟಕ್ಕೆ ಜಯವಾಗಲಿ ಎಂದು ಉಲ್ಲೇಖಿಸಲಾಗಿದೆ.