ನವದೆಹಲಿ, ಫೆ.17 (DaijiworldNews/PY): ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಮಾ.3ರಂದು ಬೆಳಗ್ಗೆ 6 ಗಂಟೆಗೆ ನೇಣಿಗೇರಿಸಲು ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಸೋಮವಾರ ಹೊಸ ಡೆತ್ ವಾರಂಟ್ ಅನ್ನು ಜಾರಿಗೊಳಿಸಿದೆ.
ರಾಷ್ಟ ರಾಜಧಾನಿ ದೆಹಲಿಯಲ್ಲಿ 2012 ರ ಡಿಸೆಂಬರ್ನಲ್ಲಿ 23 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ವಾರಂಟ್ಗಳನ್ನು ಜಾರಿಗೊಳಿಸಲು ಹೊಸ ದಿನಾಂಕವನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಈ ಆದೇಶವನ್ನು ಪ್ರಕಟಿಸಿದ್ದಾರೆ.
ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಾಗಿರುವ ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಪವನ್ ಗುಪ್ತಾ ಹಾಗೂ ಮುಕೇಶ್ ಸಿಂಗ್ ಅವರನ್ನು ಮಾ.3 ರಂದು ಬೆಳಗ್ಗೆ 6 ಗಂಟೆಗೆ ನೇಣಿಗೇರಿಸುವಂತೆ ಹೊಸ ದಿನಾಂಕವನ್ನು ನಿಗದಿಪಡಿಸಿದೆ.
ತಿಹಾರ್ ಜೈಲು ಅಧಿಕಾರಿಗಳು ಅಪರಾಧಿಗಳಿಗೆ ಸಂಬಂಧಿಸಿದ ವರದಿಯನ್ನು ಕೋರ್ಟ್ಗೆ ಹಸ್ತಾಂತರಿಸಿದ್ದರು. ನಾಲ್ವರು ಅಪರಾಧಿಗಳಲ್ಲಿ ಮೂವರು ಈಗಾಗಲೇ ಎಲ್ಲಾ ಕಾನೂನು ಅವಕಾಶಗಳನ್ನು ಬಳಸಿಕೊಂಡಿದ್ದಾರೆ. ಬೇರೆ ಯಾವುದೇ ಕೋರ್ಟ್ಗಳಲ್ಲಿ ಯಾವುದೇ ಅರ್ಜಿ ವಿಚಾರಣೆಗೆ ಬಾಕಿ ಉಳಿದಿಲ್ಲ ಎಂದು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೀವ್ ಮೋಹನ್ ಅವರು ಕೋರ್ಟ್ ಗಮನಕ್ಕೆ ತಂದಿದ್ದರು.
ಅಲ್ಲದೇ ಏಳು ದಿನಗಳೊಳಗೆ ಎಲ್ಲಾ ಕಾನೂನು ಅವಕಾಶ ಬಳಸಿಕೊಳ್ಳುವಂತೆ ದೆಹಲಿ ಹೈಕೋರ್ಟ್ ಅಪರಾಧಿಗಳಿಗೆ ಅಂತಿಮ ಗಡುವು ನೀಡಿದ್ದು, ಆ ಅವಧಿ ಮುಕ್ತಾಯಗೊಂಡಿದೆ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಫೆ.14ರಂದು ವಜಾಗೊಳಿಸಿತ್ತು. ಅಕ್ಷಯ್ ಠಾಕೂರ್ ಹಾಗೂ ಮುಕೇಶ್ ಸಿಂಗ್ ಅವರ ಕ್ಷಮಾದಾನ ಅರ್ಜಿಯನ್ನು ಕೂಡಾ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಫೆ.5ರಂದು ನಾಲ್ವರು ದೋಷಿಗಳಿಗೆ ಎಲ್ಲಾ ಕಾನೂನು ಅವಕಾಶ ಬಳಸಿಕೊಳ್ಳಲು ಒಂದು ವಾರಗಳ ಕಾಲಾವಕಾಶ ನೀಡಿತ್ತು.