ಮುಂಬೈ, ಫೆ.17 (DaijiworldNews/PY): ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡಲಿದ್ದು, ಅವರನ್ನು ಸ್ವಾಗತಿಸಲು ತೆರಿಗೆದಾರರ ಹಣವನ್ನು ಬಳಸಿ ಟ್ರಂಪ್ ಸ್ವಾಗತಕ್ಕಾಗಿ ಸಿದ್ಧತೆ ನಡೆಸುತ್ತಿರುವುದು ಅದೇ ರೀತಿ ಇದೆ. ಇದು ಭಾರತೀಯರ ಗುಲಾಮ ಮನಸ್ಥಿತಿಯನ್ನು ಬಿಂಬಿಸುತ್ತಿದೆ ಎಂದು ಶಿವಸೇನೆ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬರುವ ಸಂದರ್ಭ ಕೊಳಗೇರಿಗಳು ಕಾಣಿಸದಂತೆ ನಿರ್ಮಿಸುವ ವಿಚಾರವಾಗಿ ಟೀಕಿಸಿದ ಶಿವಸೇನೆ, ಟ್ರಂಪ್ ಭೇಟಿ ವಿದೇಶಿ ಮಾರುಕಟ್ಟೆಯಲ್ಲಿ ರೂಪಾಯಿ ಕುಸಿತವನ್ನು ತಡೆಯುವುದಿಲ್ಲ ಅಥವಾ ಗೋಡೆಯ ಆಚೆ ಬದಿಯಲ್ಲಿರುವ ಕೊಳೆಗೇರಿ ನಿವಾಸಿಗಳ ಬದುಕನ್ನು ಸುಧಾರಣೆ ಮಾಡುವುದಿಲ್ಲ ಎಂದು ತಿಳಿಸಿದೆ.
ಭಾರತಕ್ಕೆ ಚಕ್ರವರ್ತಿಯೊಬ್ಬರು ಭೇಟಿ ನೀಡುತ್ತಿರುವಂತಿದೆ ಭಾರತಕ್ಕೆ ಟ್ರಂಪ್ ಭೇಟಿ ಎಂದು ಶಿವಸೇನಾ ತನ್ನ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಬರೆದುಕೊಂಡಿದೆ.
ಸ್ವಾತಂತ್ರ್ಯ ಸಿಗುವ ಮೊದಲು ಬ್ರಿಟಿಷ್ ರಾಜ ಅಥವಾ ರಾಣಿ ಭಾರತದಂತಿರುವ ಗುಲಾಮ ರಾಷ್ಟ್ರವೊಂದಕ್ಕೆ ಭೇಟಿ ನೀಡುತ್ತಿದ್ದರು. ತೆರಿಗೆದಾರರ ಹಣವನ್ನು ಬಳಸಿ ಟ್ರಂಪ್ ಸ್ವಾಗತಕ್ಕಾಗಿ ಸಿದ್ಧತೆ ನಡೆಸುತ್ತಿರುವುದು ಅದೇ ರೀತಿ ಇದೆ. ಇದು ಭಾರತೀಯರ ಗುಲಾಮ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದಿದೆ.
ಟ್ರಂಪ್ ಬೆಂಗಾವಲು ವಾಹನ ಹಾದುಹೋಗುವ ದಾರಿಯಲ್ಲಿರುವ ಕೊಳೆಗೇರಿಗಳನ್ನು ಮರೆ ಮಾಡಲು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಬೃಹತ್ ಗೋಡೆಯೊಂದನ್ನು ನಿರ್ಮಿಸಿದೆ. ಈ ವಿಚಾರವಾಗಿ ಟೀಕಿಸಿದ ಶಿವಸೇನಾ, ಅಹಮದಾಬಾದ್ನಲ್ಲಿ ಈ ರೀತಿ ಗೋಡೆ ನಿರ್ಮಿಸುವುದಕ್ಕೆ ವಿಶೇಷ ಅನುದಾನವನ್ನು ನೀಡಲಾಗಿದೆಯೇ. ದೇಶದಾದ್ಯಂತ ಈ ರೀತಿಯ ಗೋಡೆ ನಿರ್ಮಿಸಲು ಅಮೆರಿಕ ಭಾರತಕ್ಕೆ ಸಾಲ ನೀಡಲಿದೆಯೇ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಬಹಳ ವರ್ಷಗಳ ಹಿಂದೆ ಗರೀಭೀ ಹಟಾವೋ ಎಂಬ ಘೋಷಣೆಯೊಂದಿಗೆ ಯೋಜನೆ ರೂಪಿಸಿದ್ದರು. ಆದರೆ ಈಗ ಮೋದಿ ಗರೀಭೀ ಚುಪಾವೋ (ಬಡತವನ್ನು ಅಡಗಿಸಿ) ಯೋಜನೆ ರೂಪಿಸುವಂತಿದೆ ಎಂದಿದೆ.
ಟ್ರಂಪ್ ಅಹಮದಾಬಾದ್ನಲ್ಲಿ ಮೂರು ಗಂಟೆ ಇರಲಿದ್ದಾರೆ. ಆದರೆ ಅಲ್ಲಿ ನಿರ್ಮಿಸಿರುವ ಗೋಡೆ ನಿರ್ಮಿಸಲು ಅಂದಾಜು 100 ಕೋಟಿ ಖರ್ಚು ಮಾಡಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಂಪ್ ನಡುವಿನ ರಾಜಕೀಯ ಒಪ್ಪಂದ ಎಂದು ಶಿವಸೇನಾ ತಿಳಿಸಿದೆ.