ಚೆನ್ನೈ, ಫೆ.17 (DaijiworldNews/PY): ಪತ್ರಕರ್ತರು ರೆಡ್ ಲೈಟ್ ಏರಿಯಾದವರಂತೆ ಕೆಲಸ ಮಾಡುತ್ತಾರೆ, ಹಣಕ್ಕಾಗಿ ಏನುಬೇಕಾದರೂ ಮಾಡುತ್ತಾರೆ ಎಂದು ಡಿಎಂಕೆ ಪಕ್ಷದ ಸಂಸದ ಆರ್.ಎಸ್. ಭಾರತಿ ಹೇಳಿದ್ದಾರೆ.
ಸಂಸದ ಆರ್.ಎಸ್. ಭಾರತಿ ಮಾತನಾಡಿರುವ ನಾಲ್ಕು ನಿಮಿಷದ ವಿಡಿಯೋ ಇದೀಗ ವೈರಲ್ ಆಗಿದ್ದು ಆ ವಿಡಿಯೋದಲ್ಲಿ, ಈ ಪತ್ರಕರ್ತರಿಗೆ ಕೆಲಸವಿಲ್ಲ. ಅವರು ನಮ್ಮನ್ನು ಮಾತ್ರ ದೂಷಿಸುತ್ತಾರೆ. ಜೆಡಿಯು ಉಚ್ಛಾಟಿತ ನಾಯಕ ಪ್ರಶಾಂತ್ ಕಿಶೋರ್ ಅವರನ್ನು ಚುನಾವಣೆ ತಂತ್ರ ರೂಪಿಸಲು ಈ ಹಿಂದೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಬಳಸಿಕೊಂಡಿದ್ದರು. ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬಳಸಿಕೊಂಡಿತ್ತು. ಆದರೆ, ಇದೇ ಪ್ರಶಾಂತ್ ಕಿಶೋರ್ ಅವರನ್ನು ಡಿಎಂಕೆ ಬಳಸುವಾಗ ಮಾತ್ರ ಮಾಧ್ಯಮಗಳು ಈ ವಿಚಾರವಾಗಿ ಚರ್ಚೆ ಮಾಡುತ್ತಿವೆ ಎಂದು ಹೇಳಿದ್ದಾರೆ.
ನಾನು ಡಿಎಂಕೆ ಪಕ್ಷದ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿರುವ ಕಾರಣ ಸುಮ್ಮನಿದ್ದೇನೆ. ಆದರೆ, ಈ ಟಿವಿ ಪತ್ರಕರ್ತರು ನಿಜಕ್ಕೂ ದುಷ್ಕರ್ಮಿಗಳು. ಇವರು ರೆಡ್ ಲೈಟ್ ಏರಿಯಾದವರಂತೆ ಕೆಲಸ ಮಾಡುತ್ತಾರೆ, ಹಣಕ್ಕಾಗಿ ಏನು ಬೇಕಾದರೂ ಮಾಡಿಯಾರು. ನಾನು ಇದನ್ನು ಬಹಿರಂಗವಾಗಿ ಹೇಳುತ್ತೇನೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಹಾಗೂ ದೆಹಲಿ ಚುನಾವಣೆಯಲ್ಲಿ ಎಎಪಿ ಪರವಾಗಿ ಕೆಲಸ ಮಾಡಿದ್ದ ಆಧುನಿಕ ಚುನಾವಣಾ ತಂತ್ರಜ್ಞ ಖ್ಯಾತಿಯ ಪ್ರಶಾಂತ್ ಕಿಶೋರ್ ಅವರನ್ನು ತಮ್ಮ ಕಡೆ ಸೆಳೆಯಲು ಕರ್ನಾಟಕದ ಜೆಡಿಎಸ್ ಪ್ರಯತ್ನ ನಡೆಸಿದ್ದ ಬೆನ್ನಿಗೆ 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಡಿಎಂಕೆ ಪಕ್ಷದ ಪರ ಕೆಲಸ ಮಾಡಲಿದ್ದಾರೆ ಎಂಬ ವಿಚಾರ ಘೋಷಣೆಯಾಗಿತ್ತು.
ಪತ್ರಕರ್ತರ ಟೀಕೆಯ ಕುರಿತು ಡಿಎಂಕೆ ಸಂಸದ ಆರ್.ಎಸ್. ಮಾತನಾಡಿರುವ ನಾಲ್ಕು ನಿಮಿಷದ ವಿಡಿಯೋ ದೊಡ್ಡ ವಿವಾದದ ಕೇಂದ್ರ ಬಿಂದುವಾಗಿ ಬದಲಾಗಿದ್ದು, ಈ ವಿಡಿಯೋವನ್ನು ಚೆನ್ನೈನಲ್ಲಿರುವ ಡಿಎಂಕೆ ಪಕ್ಷದ ಅನ್ಬಗಂ ಯುವ ಘಟಕದ ಕಚೇರಿಯಲ್ಲಿ ಚಿತ್ರಿಸಲಾಗಿದೆ ಎಂದು ಹೇಳಲಾಗುತ್ತಿದೆ.