ಬೆಂಗಳೂರು, ಫೆ 17 (DaijiworldNews/SM): ಲಕ್ಷ್ಮಣ್ ಸವದಿಯವರ ಉಪಮುಖ್ಯಮಂತ್ರಿ ಸ್ಥಾನ ಭದ್ರಗೊಂಡಿದೆ. ನಿರೀಕ್ಷೆಯಂತೆ ಅವರು ಮೇಲ್ಮನೆ ಉಪಚುನಾವಣೆಯಲ್ಲಿ ಅನಾಯಾಸವಾಗಿ ಗೆಲುವು ಸಾಧಿಸಿದ್ದಾರೆ.
ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಇದೀಗ ವಿಧಾನಸಭೆಯಿಂದ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಸವದಿ ಗೆದ್ದುಬೀಗಿದ್ದಾರೆ. ಕಾಂಗ್ರೆಸ್ ನ ರಿಜ್ವಾಜ್ ಅರ್ಷದ್ ಅವರ ರಾಜೀನಾಮೆಯಿಂದ ಒಂದು ಸ್ಥಾನ ತೆರವಾಗಿತ್ತು. ಚುನಾವಣಾ ಕಣದಿಂದ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಹಿಂದೆ ಸರಿದರು. ಹೀಗಾಗಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಸುಲಭವಾಗಿ ಪರಿಷತ್ ಗೆ ಎಂಟ್ರಿಯನ್ನು ಪಡೆದುಕೊಂಡಿದ್ದಾರೆ.
ಬೆಳಗ್ಗೆ 9 ಗಂಟೆಯಿಂದ ಮತದಾನ ಪ್ರಕ್ರಿಯೆ ಪ್ರಾರಂಭವಾಗಿತ್ತು. ಉಪಚುನಾವಣೆಯಲ್ಲಿ ಒಟ್ಟು 120 ಮಂದಿ ಶಾಸಕರು ಮತ ಚಲಾಯಿಸಿದರು. ಬಿಜೆಪಿಯ ಅನಾರೋಗ್ಯಪೀಡಿತ ರಾಮದಾಸ್ ಹೊರತು ಪಡಿಸಿ ಉಳಿದೆಲ್ಲಾ ಶಾಸಕರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಒಟ್ಟು 113 ಮತಗಳಿಂದ ಡಿಸಿಎಂ ಸವದಿಯವರು ಗೆಲುವಿನ ನಗೆ ಚೆಲ್ಲಿದರು.