ಬೆಂಗಳೂರು, ಫೆ 18 (Daijiworld News/MB) : ರಾಜ್ಯದ ಪಾಲಿನ ಜಿಎಸ್ಟಿ ಪರಿಹಾರದ ಹಣ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಮಂಡಿಸಿದ್ದ ಕೇಂದ್ರ ಮುಂಗಡ ಪತ್ರ 2020-21ರ ಕುರಿತು ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಉದ್ಯಮಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಶೀಘ್ರದಲ್ಲೇ ರಾಜ್ಯದ ಜಿಎಸ್ಟಿ ತೆರಿಗೆ ನಷ್ಟ ಪರಿಹಾರ ಕೊಡುವ ಭರವಸೆ ನೀಡಿದರು.
ಆ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, "ಜಿಎಸ್ಟಿ ತೆರಿಗೆ ಬಾಕಿ ಕರ್ನಾಟಕದ ಒಂದೇ ಸಮಸ್ಯೆ ಅಲ್ಲ. ದೇಶದ ಎಲ್ಲ ರಾಜ್ಯಗಳಿಗೂ ಜಿಎಸ್ಟಿ ತೆರಿಗೆ ನಷ್ಟ ಪರಿಹಾರ ಕೇಂದ್ರದಿಂದ ಬಾಕಿ ಕೊಡಬೇಕಿದೆ. ಕಳೆದ ವರ್ಷ ಕೇಂದ್ರದ ಬಳಿ ಜಿಎಸ್ಟಿ ತೆರಿಗೆ ಬಾಕಿ ಕೊಡಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷದ ಅಂತ್ಯಕ್ಕೆ ಎರಡು ತಿಂಗಳ ಜಿಎಸ್ಟಿ ತೆರಿಗೆ ಬಾಕಿ ಇತ್ತು. ಆ ಜಿಎಸ್ಟಿ ತೆರಿಗೆ ಪರಿಹಾರವನ್ನು ಕಳೆದ ಡಿಸೆಂಬರ್ ವೇಳೆಯಲ್ಲಿ ರಾಜ್ಯಕ್ಕೆ ನೀಡಲಾಗಿತ್ತು. ಕೊನೆಯ ತ್ರೈಮಾಸಿಕದ ಬಾಕಿಯನ್ನೂ ಶೀಘ್ರದಲ್ಲೇ ನೀಡಲಾಗುತ್ತದೆ" ಎಂದು ತಿಳಿಸಿದರು.
ಹಾಗೆಯೇ ಮನ್ರೇಗಾ ಯೋಜನೆಯಲ್ಲಿ ರಾಜ್ಯದ ವೇತನ ಬಾಬ್ತು ಬಾಕಿ ಯಾವುದೂ ಇಲ್ಲ. 14ನೇ ಹಣಕಾಸು ಆಯೋಗದ ಅನುದಾನವೂ ಸೇರಿದಂತೆ ಇಲ್ಲಿಯವರೆಗೆ ರಾಜ್ಯಕ್ಕೆ 2.03 ಲಕ್ಷ ಕೋಟಿ ರೂ ನಾನಾ ಅನುದಾನಗಳು ನೀಡಲಾಗಿದೆ ಎಂದರು.