ಬೆಂಗಳೂರು, ಫೆ 18 (Daijiworld News/MB) : "ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ನೆರೆಯಲ್ಲಿ ಸಾವನ್ನಪ್ಪಿದವರಿಗೆ ಇದುವರೆಗೂ ಪರಿಹಾರ ನೀಡಿಲ್ಲ. ಮೃತಪಟ್ಟವರ ಡಿಎನ್ಎ ವರದಿ ಬಂದ ಬಳಿಕ ಪರಿಹಾರವನ್ನು ಅವರ ಕುಟುಂಬಕ್ಕೆ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ" ಎಂದು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರು ಮಾಧ್ಯಮಗಳ ಮುಂದೆ ನೊಂದು ಹೇಳಿದ್ದಾರೆ.
ಸೋಮವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, "ನೆರೆ ಸಂತ್ರಸ್ತ ಸಂಜೀವ್ ಕಾಂಬಳೆ, ನೆರೆಯಲ್ಲಿ ಮೃತಪಟ್ಟವರಿಗೆ ಇದುವರೆಗೂ ಪರಿಹಾರ ನೀಡಿಲ್ಲ. ಸಾವನ್ನಪ್ಪಿದವರ ಡಿಎನ್ಎ ವರದಿ ಬಂದ ಬಳಿಕ ಪರಿಹಾರವನ್ನು ಅವರ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಡಿಎನ್ಎಯಲ್ಲಿ ಸಾವನ್ನಪ್ಪಿದವರು ನರೆಯಿಂದಲ್ಲೇ ಸಾವನ್ನಪ್ಪಿದ್ದಾರೆ ಎಂದು ದೃಡಪಟ್ಟರೆ ಮಾತ್ರವೇ ಪರಿಹಾರ ನೀಡಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದು ಯಾವ ನ್ಯಾಯ" ಎಂದು ಅವರು ಪ್ರಶ್ನಿಸಿದರು.
"ನೆರೆಯಿಂದಾಗಿ ಹೊಲ, ಮನೆ, ಶಾಲೆ ಕಟ್ಟಡಕ್ಕೆ ಮೊದಲಾದ ಪ್ರದೇಶಗಳಲ್ಲಿ ಹಾನಿಯಾಗಿದೆ. ಆದರೆ ಈವರೆಗೂ ಯಾರಿಗೂ ಪರಿಹಾರ ನೀಡಿಲ್ಲ. ತಾತ್ಕಾಲಿಕವಾಗಿ ಹತ್ತು ಸಾವಿರ ರೂಪಾಯಿ ನೀಡಲಾಗಿದೆ. ನೆರೆ ಬಗ್ಗೆ ಸಮೀಕ್ಷೆ ನಡೆಸಿದ ಬಳಿಕ ಪರಿಹಾರ ನೀಡಲು ಮುಂದಾದರು. ಎ, ಬಿ, ಸಿ ಎಂದು ಮೂರು ವರ್ಗ ಮಾಡಿ ಪರಿಹಾರ ನೀಡಲು ಮುಂದಾದರು. ಆದರೆ ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡದೆ ಪೂರ್ಣ ಮನೆ ಬಿದ್ದವರನ್ನು ಸಿ ವರ್ಗಕ್ಕೆ ಸೇರಿಸಿ ಅಲ್ಪ ಪ್ರಮಾಣದ ಮನೆ ಬಿದ್ದವರನ್ನು ಎ ವರ್ಗಕ್ಕೆ ಸೇರಿಸಿದ್ದಾರೆ. ಈ ಬಗ್ಗೆ ಪುನರ್ ಸಮೀಕ್ಷೆ ನಡೆಯಬೇಕು ಎಂದು ಹಲವು ಬಾರಿ ಮನವಿ ಮಾಡಿದರು ಏನು ಪ್ರಯೋಜನವಿಲ್ಲ" ಎಂದು ಆರೋಪಿಸಿದರು.
"ಪೂರ್ತಿ ಮನೆ ಬಿದ್ದವರಿಗೆ 5 ಲಕ್ಷ ನೀಡುವುದಾಗಿ ಹೇಳಿದ ಸರ್ಕಾರ ಈಗ 3 ಲಕ್ಷಕ್ಕೆ ಪರಿಹಾರ ಧನ ಇಳಿಸಲು ಮುಂದಾಗಿದೆ. ಮನೆ ನಿರ್ಮಾಣ ಮಾಡಲು ಮುಂದಾದವರಿಗೆ ಕೇವಲ ಒಂದು ಲಕ್ಷ ನೀಡಿ ಕೈ ತೊಳೆದುಕೊಳ್ಳಲಾಗಿದೆ. ಅವರು ಮನೆ ನಿರ್ಮಾಣ ಮಾಡಲಾಗದೆ ಬೀದಿಗೆ ಬಿದಿದ್ದಾರೆ. ಶಾಲೆ, ಅಂಗನವಾಡಿಗಳ ಕಟ್ಟಡ ದುರಸ್ತಿ ಕಾರ್ಯವೂ ಆಗಿಲ್ಲ" ಎಂದು ದೂರಿದರು.
"ನೆರೆ ಪರಿಹಾರಕ್ಕೆ ಈ ಮೊದಲೇ ಘೋಷಿಸಿದ ಪರಿಹಾರ ಧನ ನೀಡಬೇಕು. ಪುನರ್ ಸಮೀಕ್ಷೆ ನಡೆಸಬೇಕು. ಬೆಳೆ ಪರಿಹಾರ ನೀಡುವ ಜತೆಗೆ ಶಾಲೆಗಳ ದುರಸ್ತಿ ಕಾರ್ಯ ಶೀಘ್ರವೇ ಕೈಗೊಳ್ಳಬೇಕು" ಎಂದು ಅವರು ಆಗ್ರಹ ಮಾಡಿದರು.