ಬೆಂಗಳೂರು, ಫೆ 18 (Daijiworld News/MB) : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯದ ಗಡಿ ಜಿಲ್ಲೆಗಳಲ್ಲಿ ವೈದ್ಯಕೀಯ ಮತ್ತು ಜೈವಿಕ ತ್ಯಾಜ್ಯ ಎಸೆಯುತ್ತಿರುವ ಕೇರಳಿಗರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೃತಜ್ಞತೆ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಅವರು, "ನಮ್ಮ ಜಿಲ್ಲೆಗಳಲ್ಲಿ ವೈದ್ಯಕೀಯ, ಜೈವಿಕ ತ್ಯಾಜ್ಯ ಎಸೆಯುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿರುವ ಹಾಗೂ ತ್ವರಿತ ಪ್ರತಿಕ್ರಿಯೆ ನೀಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಧನ್ಯವಾದಗಳು" ಎಂದು ಉಲ್ಲೇಖ ಮಾಡಿದ್ದಾರೆ.
ಗಡಿ ಭಾಗದ ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಕೇರಳದವರು ವೈದ್ಯಕೀಯ, ಜೈವಿಕ ತ್ಯಾಜ್ಯ ಎಸೆಯುತ್ತಿದ್ದಾರೆ ಎಂಬ ವರದಿಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಇಲಾಖೆ ಮತ್ತು ಆಯಾ ಜಿಲ್ಲೆಯ ಅಧಿಕಾರಿಗಳಿಗೆ ವ್ಯಕ್ತಿಗತವಾಗಿ ಮತ್ತು ಯಾವುದೇ ಸಂಸ್ಥೆ ನಡೆಸುವ ರಹಸ್ಯ ಚಟುವಟಿಕೆ ಬಗ್ಗೆ ನಿಗಾವಹಿಸುವಂತೆ ಸೂಚಿಸಿದ್ದೇನೆ. ಆಲೆ ಮನೆಗಳಲ್ಲಿ ಇಂಧನವಾಗಿ ಇಂಥ ತ್ಯಾಜ್ಯವನ್ನು ಇಂಧನವಾಗಿ ಬಳಸದಂತೆಯೂ ಸೂಚನೆ ನೀಡಿದ್ದೇನೆ’ ಎಂದು ಯಡಿಯೂರಪ್ಪ ಹೇಳಿದ್ದಾರೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ.