ಬೆಂಗಳೂರು, ಫೆ 18 (Daijiworld News/MB) : ಅಧಃಪತನಕ್ಕೆ ಕುಸಿದಿರುವ ದೇಶದ ಆರ್ಥಿಕತೆ ಕಾಣಿಸದಂತೆ ಮೋದಿ ಅವರು ಯಾವ ಗೋಡೆ ಕಟ್ಟುತ್ತಾರೆ? ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತದ ಭೇಟಿ ವೇಳೆ ಅಹ್ಮದಾಬಾದ್ ನ ಸ್ಲಂಗಳು ಕಾಣದಂತೆ ಪ್ರಧಾನಿ ಮೋದಿ ಅವರು ಎತ್ತರದ ಗೋಡೆಗಳನ್ನು ಕಟ್ಟಿಸುತ್ತಿದ್ದಾರಂತೆ! ಆದರೆ ಅಧಃಪತನಕ್ಕೆ ಕುಸಿದಿರುವ ದೇಶದ ಆರ್ಥಿಕತೆ ಕಾಣಿಸದಂತೆ ಮೋದಿ ಅವರು ಯಾವ ಗೋಡೆ ಕಟ್ಟುತ್ತಾರೆ? ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶವ್ಯಾಪಿ ಭುಗಿಲೆದ್ದಿರುವ ಸಿಎಎ ವಿರೋಧಿ ಹೋರಾಟ ಕಾಣಿಸದಂತೆ ಯಾವ ಭದ್ರಕೋಟೆ ನಿರ್ಮಿಸುತ್ತಾರೆ? ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ನಿರುದ್ಯೋಗ ಸಮಸ್ಯೆ ಮರೆಮಾಚಲು ಯಾವ ತಡೆಗೋಡೆ ನಿರ್ಮಿಸುತ್ತಾರೆ? ಮೋದಿ ಅವರೇ ಉತ್ತರಿಸುವಿರಾ? ಎಂದು ಪ್ರಶ್ನಿಸಿದ್ದಾರೆ.
ಅಹಮದಾಬಾದ್ಗೆ ಫೆ.24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಹಿನ್ನಲೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಈ ನಡುವೆ "ವಿಮಾನ ನಿಲ್ದಾಣದ ಬಳಿ ಇರುವ ಕೊಳೆಗೇರಿ ಕಾಣಿಸದಂತೆ ಬಿಜೆಪಿ ಆಡಳಿತವಿರುವ ಅಹಮದಾಬಾದ್ ಮಹಾನಗರ ಪಾಲಿಕೆ (ಎಎಂಸಿ) 500 ಮೀಟರ್ ಉದ್ದದ ಗೋಡೆ ನಿರ್ಮಿಸುತ್ತಿದೆ" ಎಂದು ಕಾಂಗ್ರೆಸ್ ಆರೋಪಿಸಿತ್ತು. ಹಾಗೆಯೇ ಟ್ರಂಪ್ ಭೇಟಿಯು ಭಾರತಕ್ಕೆ ಚಕ್ರವರ್ತಿಯೊಬ್ಬರು ಭೇಟಿ ನೀಡುತ್ತಿರುವಂತಿದೆ. ಅದಕ್ಕಾಗಿ ನಡೆಯುತ್ತಿರುವ ಸಿದ್ಧತೆಗಳು ‘ಗುಲಾಮರ ಮನಸ್ಥಿತಿ’ಯನ್ನು ಬಿಂಬಿಸುವಂತಿವೆ ಎಂದು ಶಿವಸೇನಾ ಸೋಮವಾರ ಟೀಕಿಸಿದೆ.