ಬೆಂಗಳೂರು, ಫೆ 18 (Daijiworld News/MB) : ರಾಜ್ಯಪಾಲರ ಭಾಷಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿಷಯ ಪ್ರಸ್ತಾಪವಾದರೆ ಪ್ರತಿಭಟನೆ ಮಾಡಲು ತಯಾರಾಗಿ ಬಂದಿದ್ದ ಕಾಂಗ್ರೆಸ್ ಶಾಸಕರಿಗೆ ನಿರಾಸೆ ಕಾದಿತ್ತು. ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸಿಎಎ ಬಗ್ಗೆ ಒಂದು ಸಾಲು ಕೂಡಾ ಮಾತನಾಡಲಿಲ್ಲ.
ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ವಿಧಾನಸಭೆಯೊಳಗೆ ಘೋಷಣಾ ಭಿತ್ತಿ ಪತ್ರಗಳನ್ನು ಒಯ್ದಿದ್ದು ರಾಜ್ಯಪಾಲರ ಭಾಷಣ ಮುಗಿದ ಬಳಿಕ ಹೊರಬಂದ ಐವನ್, "ನಾವು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಬೇಕು ಎಂದು ಸಜ್ಜಾಗಿ ಬಂದಿದ್ದೆವು, ಆಗಲಿಲ್ಲ ಎಲ್ಲ ವೇಸ್ಟ್ ಆಯಿತು" ಎಂದು ಸುದ್ದಿಗಾರರಿಗೆ ಹೇಳಿದರು.
ರಾಜ್ಯಪಾಲ ವಜುಭಾಯಿ ವಾಲಾ ಅವರು ಬೆಳಿಗ್ಗೆ 11 ಕ್ಕೆ ವಿಧಾನಸಭೆ ಮೊಗಸಾಲೆಯಿಂದ ಸಭಾಂಗಣದೊಳಗೆ ಪ್ರವೇಶಿಸಿದರು. ಅವರ ಹಿಂದೆಯೇ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮೊಗಸಾಲೆಯೊಳಗೆ ಪ್ರವೇಶಿಸಲು ಬಂದಾಗ ಮಾರ್ಷಲ್ಗಳು ತಡೆದರು. ಅವರು ಸಮವಸ್ತ್ರದಲ್ಲಿ ಬಂದ ಕಾರಣಕ್ಕೆ ಪ್ರವೇಶ ನಿರಾಕರಿಸಲಾಯಿತು. ಇದರಿಂದ ಆಯುಕ್ತರು ತಬ್ಬಿಬ್ಬಾದರು. ಖಾಕಿ ಸಮವಸ್ತ್ರದಲ್ಲಿ ಬರುವಂತೆ ಇಲ್ಲ ಎಂಬುದನ್ನು ಅವರಿಗೆ ತಿಳಿಸಲಾಯಿತು. ಇದಾದ ಒಂದೆರಡು ನಿಮಿಷಗಳಲ್ಲೇ ಅವರನ್ನು ಮೊಗಸಾಲೆಯೊಳಗೆ ಬಿಡಲಾಯಿತು.